28 November 2010

ಸಚಿನ್ ಬಂದ್ರು . . !




ಆವತ್ತು 2006 ಮೇ 6.

ಕ್ರಿಕೆಟ್ ಕಲಿ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

ಆಗ ರಾತ್ರಿ 9.30 ರ ಹೊತ್ತು.ನೇರವಾಗಿ ಲಾಡ್ಜ್‌ಗೇ ಬಂದ ಸಚಿನ್ ವಿಶ್ರಾಂತಿ ಪಡೆದಿದ್ದರು. ಈಟಿವಿಯಿಂದ ವಿನಾಯಕನೂ ಬಂದಿದ್ದ.ನಾವಿಬ್ಬರೂ ಅಂದು ರಾತ್ರಿ ಸುಬ್ರಹ್ಮಣ್ಯದಲ್ಲೇ ಇದ್ದೆವು. ಸಚಿನ್‌ದು ಸರ್ಪಸಂಸ್ಕಾರ. ಹಾಗಾಗಿ ಅವರು 3 ದಿನಗಳ ಕಾಲ ಕುಕ್ಕೆಯಲ್ಲೇ ಇರಬೇಕು.ಅಂದು ರಾತ್ರಿ ಯಾವುದೇ ಘಟನೆಗಳು ನಡೆಯಲಿಲ್ಲ.ಒಂದೆರಡು ಸಾಲಿನ ಸುದ್ದಿ ಅಷ್ಟೇ.ಯಾಕೆಂದರೆ ಅವರು ಧರ್ಮಸ್ಥಳಕ್ಕೆ ಬಂದು ಕುಕ್ಕೆಗೆ ಬಂದಿದ್ದರು.

ಬೆಳಗ್ಗೆ 6 ಗಂಟೆ.

ಸಚಿನ್ ರೂಂನಿಂದ ಹೊರಬಂದಿರಲಿಲ್ಲ.ವಿನಾಯಕ ನನಗೆ ಮೇಲಿನಿಂದ ಮೇಲೆ ಫೋನು ಮಾಡುತ್ತಲೇ ಇದ್ದ."ಏ ಅಣ್ಣಾ ಎಲ್ಲಿದ್ದ ಬಾ ಅಂತ . ." ಹೇಳುತ್ತಲೇ ಇದ್ದ. ಅಂತೂ 6.30 ಕ್ಕೆ ಸುಬ್ರಹ್ಮಣ್ಯಕ್ಕೆ ತಲಪಿದೆ. ಅಂತೂ ಸಚಿನ್ 7 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೊರಟರು. ನಾನು ಮತ್ತು ವಿನಾಯಕ ಇಬ್ಬರೂ ಸಚಿನ್‌ನ ಹಿಂದು ಮುಂದು ಹೋಗಿ ವಿಷುವಲ್ ಫೋಟೂ ತೆಗೆದುಕೊಂಡೆವು.ಜೊತೆಗೆ ಇನ್ನೂ ಅನೇಕ ಮಾಧ್ಯಮದ ಮಂದಿ ಇದ್ದರು. ಮಂಗಳೂರಿನಿಂದಲೂ ಅನೇಕರು ಬಂದಿದ್ದರು. ಸಚಿನ್‌ರದ್ದು ಪೂಜೆ ಮುಗೀತು.ಅವರು ಯಾವ ಮಾಧ್ಯಮದ ಮಂದಿಯಲ್ಲೂ ಮಾತನಾಡಿರಲಿಲ್ಲ.ನಮ್ಮ ಪತ್ರಿಕೆಯಿಂದಲೂ ಮಂಗಳೂರಿನಿಂದ ಬಂದಿದ್ದರು.ಆದರೆ ವರದಿಯ ಉಸ್ತುವಾರಿ ನನಗಿತ್ತು.ಅಂತೂ ಮಧ್ಯಾಹ್ನದ ಸಮಯಕ್ಕೆ ನಾನು ಬೇರೊಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ.ಸಂಜೆ ಬಂದು ನಾನು ಸಚಿನ್ ಸುದ್ದಿಯನ್ನೂ ಕಳುಹಿಸಿದೆ. ಯಾರಲ್ಲೂ ಮಾತಾಡಿಲ್ಲ ಅಂತಾನೂ ಆಫೀಸಿಗೆ ಹೇಳಿದೆ.

ಮರುದಿನ ನನ್ನ ಬೈಲೈನ್ ಹಾಕಿ ನ್ಯೂಸ್ ಬಂದಿದೆ.

ಆದರೆ ಅದು ಎಲ್ಲವೂ ನಾನು ಬರೆದ ಸುದ್ದಿಯಾಗಿರಲಿಲ್ಲ.ಸ್ವಲ್ಪ ಹೊತ್ತಿನ ನಂತರ ನಮ್ಮ ಮಂಗಳೂರು ಪ್ರತಿನಿಧಿಯಿಂದ ಫೋನು ಬಂತು.ನೀವ್ಯಾಕೆ ನ್ಯೂಸ್ ಕಳುಹಿಸಿದ್ದು,ನನ್ನ ನ್ಯೂಸ್‌ಗೆ ನಿಮಗೆ ಬೈಲೈನ್ ಹಾಕಿದಾರೆ ಎಂದು ಹೇಳಿದರು.ಅದಕ್ಕೆ ನನಗೇನು ಗೊತ್ತಿಲ್ಲ ,ನಾನು ಕೂಡಾ ನ್ಯೂಸ್ ಕಳುಹಿಸಿದ್ದೆ ಎಂದು, ನಂತರ ಆಫೀಸಿಗೆ ಕೇಳಿದೆ."ಹೋ . .. ಹಾಗಾಯಿತಾ. . ". ಎಂದು ಕೇಳಿದರು.ಮತ್ತೇನಾಯಿತು ಗೊತ್ತಿಲ್ಲ. .

ಅಂದಿನ ದಿನ ಹಾಗಾದರೆ ನಾನು ಮತ್ತು ವಿನಾಯಕ ಮೂರನೇ ದಿನ ಬೆಳಗಿನಿಂದಲೇ ಸಚಿನ್‌ರನ್ನು ಮಾತನಾಡಿಸಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆವು. ಆದರೆ ಸಂಜೆಯವರೆಗೂ ಸಿಕ್ಕೇ ಇಲ್ಲ.ಮಾತನಾಡಿಯೇ ಇಲ್ಲ.ಸಚಿನ್ ಕುಕ್ಕೆಯಿಂದ ಹೋಗೇ ಬಿಟ್ಟರು.ಆದರೆ ಮರುದಿನ ನೋಡಿದ್ರೆ ಒಂದೆರಡು ಪ್ರಮುಖ ಪತ್ರಿಕೆಯಲ್ಲಿ ಸಚಿನ್ ಹೇಳಿಕೆ ಇತ್ತು. ನಾನು ಮುಂದಿನ ಪ್ರವಾಸಕ್ಕೆ ಸಿದ್ದ ಎಂಬುದು ಅದರ ಸಾರಾಂಶ. ಈ ನ್ಯೂಸ್ ದೇಶದಾದ್ಯಂತ ಪಿಟಿ‌ಐ ಮೂಲಕ ಹೋಯಿತು.

ಸಚಿನ್ ಮುಂಬಯಿಗೆ ತಲುಪುತ್ತಿದ್ದಂತೆಯೇ ಕ್ರೀಡಾ ಚಾನೆಲ್‌ವನರು ಲೋಗೋ ಹಿಡಿದು ಕೇಳಿದ್ರು ,ನೀವು ಸುಬ್ರಹ್ಮಣ್ಯದಲ್ಲಿ ಮುಂದಿನ ಪ್ರವಾಸಕ್ಕೆ ರೆಡಿ ಅಂದ್ರಲ್ಲ ?. ಅಂತ ಪ್ರಶ್ನೆ ಮಾಡಿದ್ರು. ಆಗ ಸಚಿನ್ ಅಂದ್ರು , ನಾನು ಅಲ್ಲಿ ಯಾರಲ್ಲೂ , ಯಾವುದೇ ಮೀಡಿಯಾದಲ್ಲೂ ಮಾತಾಡಿಲ್ಲ , ಇದು ಮಾಧ್ಯಮದ್ದೇ ಸೃಷ್ಠಿ ಅಂತಂದ್ರು . .!.

ಮತ್ತೆ ಗೊತ್ತಾಯಿತು , ಸ್ವಾಮೀಜಿಗಳಲ್ಲಿ ಸಚಿನ್ ಹಾಗೇ ಹೇಳಿದ್ದಾರಂತೆ ಅದನ್ನು ಅವರು ಬೇರೆಯವರಲ್ಲಿ ಕೇಳಿ ಬರೆದದ್ದು ಅಂತ . . .!. ವಾಸ್ತವವಾಗಿ ಸಚಿನ್ ಹಾಗೆ ಹೇಳಿದ್ದರೋ ಅಲ್ಲ ಆ ಪತ್ರಕರ್ತರೇ ಸೃಷ್ಠಿ ಮಾಡಿದ್ದೋ ಗೊತ್ತಿಲ್ಲ. ಅಲ್ಲಾ ಇವರಿಗೇನು ಕೇಳಿತ್ತೋ ಗೊತ್ತಿಲ್ಲ. ಅಂತೂ ಸಚಿನ್‌ಗೆ ಇಲ್ಲಿನ ಮೀಡಿಯಾ ಹೇಗೆ ಅಂತ ಗೊತ್ತಾಗಿರಬಹುದು . .! ಅಂತೂ ಹೀಗೂ ಮಾಡಲಾಗುತ್ತೆ ಅಂತ ಹೊಸದೊಂದು ತಂತ್ರ ಗೊತ್ತಾಯಿತು.ಸುದ್ದಿಗಾಗಿ ಸುದ್ದಿ ಮಾಡೋದು , ಸುದ್ದಿಯ ಹಪಹಪಿ ಹೇಗಿರುತ್ತೆ ಅನ್ನೋದು ಕೂಡಾ ಗೊತ್ತಾಯ್ತು . .!.

ಸುದ್ದಿಗಾಗಿ ಕುಮಾರಪರ್ವತ ಹತ್ತಿದೆವು . !

ಆಗ ನನ್ನಲ್ಲಿ ಕ್ಯಾಮಾರಾ ಇದ್ದಿರಲಿಲ್ಲ.ಯಾವುದಾದ್ರೂ ಫೋಟೋ ಬೇಕಾದ್ರೆ ಸುಬ್ರಹ್ಮಣ್ಯದ ಶಾಂತಲಾ ಸ್ಟುಡಿಯೋದ ಲೋಕೇಶ ಅವರನ್ನು ಕರೆದುಕೊಂಡು ಹೋಗುತ್ತಿದ್ದೆ. ನಮ್ಮಂತೆ ಅವರಿಗೂ ಆಗ ಇದೊಂದು ರೀತಿಯ ಥ್ರಿಲ್. ಇದೇ ರೀತಿಯ ಥ್ರಿಲ್‌ನಿಂದಾಗಿಯೇ ನಾವೊಮ್ಮೆ ಕುಮಾರಪರ್ವತದ ಗಿರಿಗದ್ದೆಯವರೆಗೆ ಹೋಗಿದ್ದೆವು.ಆದರೆ ಆ ಸ್ಟೋರಿ ಮಾತ್ರಾ ಬಂದದ್ದು ಒಳ ಪುಟದಲ್ಲಿ , ಅದೂ ಚಿಕ್ಕದಾಗಿ. .!.

ಅಂದು ಯಾವ ವಾರ ಅಂತ ನೆನಪಿಲ್ಲ.ಸುಬ್ರಹ್ಮಣ್ಯಕ್ಕೆ ಹೋಗಿದ್ದೆ. ಅದ್ಯಾಕೋ ಕುಮಾರಪರ್ವತ ಚಾರಣ ಮಾಡುವವರಿಗೆ ಅಲ್ಲಿ ಅರಣ್ಯ ಇಲಾಖೆ ಭಾರೀ ಫೀಸು ತೆಗೀತಾರೆ ಎಂಬ ವಿಷಯ ನೆನಪಾಯಿತು. ಕೂಡಲೇ ಲೋಕೇಶ್‌ಗೆ ಫೋನು ಮಾಡಿದಾಗ ಇವತ್ತು ಫ್ರೀ ಇದ್ದೇನೆ ಅಂತ ಹೇಳಿದ್ರು. ಗಿರಿಗದ್ದೆಗೆ ಹೋವುವನ ಎಂದು ಕೇಳಿದ್ದೇ ತಡ. ರೆಡಿ ಅಂತ ಕ್ಯಾಮಾರ ಹೆಗಲಿಗೆ ಹಾಕಿಕೊಂಡು ಬಂದೇ ಬಿಟ್ಟರು. ಸರಿ ನಮ್ಗೆ ಸುಮಾರು 3 ಗಂಟೆ ಬೇಕಾಗಬಹುದು ಅಂತ ಯೋಚಿಸಿ ತಿಂಡಿ , ನೀರು ತೆಕ್ಕೊಂಡು ನಾನು ಮತ್ತು ಲೋಕೇಶ್ ಗಿರಿಗದ್ದೆ ಬೆಳಗ್ಗೆ 10.30 ರ ಸುಮಾರಿಗೆ ಹೊರಟೆವು. ಸುಮಾರು 2.30 ತಾಸು ನಡೆದಾಗ ಗಿರಿಗದ್ದೆ ಬಂತು. ಅಬ್ಬಾ ಅಂತ ಗಿರಿಗದ್ದೆ ಭಟ್ಟರ ಮನೆಗೆ ಹೋಗಿ ನೀರು ಕುಡಿದು, ಈಗ ಬರ್ತೇವೆ ಅಂತ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ಗೆ ಹೋದೆವು.ಮೊದಲೇ ನಾವು ಮಾತನಾಡಿದಂತೆ ನಾನು ಅರಣ್ಯ ಸಿಬ್ಬಂದಿಗಳ ಜೊತೆ ಮಾತನಾಡೋದು , ಲೋಕೇಶ ಫೋಟೋ ತೆಗೆಯೋದು. ಹಾಗೇ ಎಲ್ಲವೂ ಆಯಿತು. ನಮ್ಮ ಕೆಲಸ ಆದ ನಂತರ ಗಿರಿಗದ್ದೆಯಲ್ಲಿ ಊಟ ಮಾಡಿ . ಅವರದ್ದೂ ಫೋಟೋ ತೆಕ್ಕೊಂಡು ಸುಬ್ರಹ್ಮಣ್ಯಕ್ಕೆ ತಲಪೋವಾಗ 5.30. ಆ ನಂತ್ರ ಮನೆಗೆ.

ಆ ಸುದ್ದಿ ಕಳುಹಿಸಿದೆ. ಆದರೆ ಅದು ಬಂದದ್ದು ಮಾತ್ರಾ ಲೋಕಲ್ ಎಡಿಶನ್‌ನ ಒಳಗಿನ ಪುಟದಲ್ಲಿ.ತುಂಬಾ ಬೇಸರವಾಗಿತ್ತು. ಆದರೆ ಬಿಡಿ , ಅದೇ ಸ್ಟೋರಿಯನ್ನು ಒಂದು ತಿಂಗಳ ನಂತರ ಸ್ಟೇಟ್ ಪೇಜ್‌ಗೆ ಹಾಕಬೇಕು ಅಂತ ಹೇಳಿ ಹಾಕಿಸಿದ್ದೆ. ಅದು ಬೇರೆ. ನಾವು ಅಷ್ಟು ದೂರ ನಡೆದುಕೊಂಡು ಹೋಗಿ ಒಂದೊಳ್ಳೆ ಸ್ಟೋರಿ ಕೊಟ್ರೆ ಅದು ಠುಸ್ ಆದಾಗ ಹೇಗಾಗಬೇಡ?. ಸ್ಥಳಕ್ಕೆ ಹೋಗದೇ ಬರೆಯೋರು ಎಷ್ಟು ಜನ ಇಲ್ಲ. ಅಂತಹದ್ದರಲ್ಲಿ ನಾವು ಹೋಗಿ ಬರೆದರೂ ಹೀಗಾಯಿತಲ್ಲ ಎಂದು ಬೇಸರವಾಗಿತ್ತು ಆಗ.

ನಂಗಂತೂ ಆಗ ಲೋಕೇಶ್‌ನ ಆಸಕ್ತಿಗೆ ಖುಷಿಯಾಗಿತ್ತು.ನಾವು ಹಣವೂ ಆಗ ಅವರಿಗೆ ಕೊಡುವುದು ಕಡಿಮೆ.ಯಾವಾಗಲಾದರೂ ಕೊಡುತ್ತಿದ್ದೆವು.ಅದೂ ಅವರ ಶ್ರಮಕ್ಕೆ ಸಾಲದು.ಅವರ ಸಹಕಾರ ನಮಗೆ ಯಾವಾಗಲೂ ಇದ್ದೇ ಇತ್ತು.ಅದಕ್ಕೆ ನಾವು ಬೆಲೆ ಕಟ್ಟಲಾದೀತೇ?.ಹಾಗಾಗಿ ಲೋಕೇಶನಿಗೆ ಇವತ್ತೂ ಒಂದು ಥ್ಯಾಕ್ಸ್ ಇದೆ. ಈಗ ಲೋಕೇಶ್ ಪ್ರಜಾವಾಣಿಗೆ ನ್ಯೂಸ್ ಬರೀತಾರೆ. ಹಾಗಾಗಿ ನಮ್ಮತ್ರ ಇರೋ ಫೋಟೋ ಈಗ ಅವರಿಗೂ ಕಳುಹಿಸುತ್ತೇನೆ.ಏನಿದ್ದರೂ ಅವರಿಗೊಂದು ಫೋನು ಮಾಡೇ ಮಾಡ್ತೇನೆ.ಥ್ಯಾಂಕ್ಸ್ ಲೋಕೇಶ್.




ಆವತ್ತು ಲೋಕೇಶ ಕ್ಲಿಕ್ಕಿಸಿದ ಚಿತ್ರ ಇದು . .

ಜೈಲು ಹಕ್ಕಿಯ ಕತೆ. . .

ಆತ ಕೈದಿ.ಕಂಬಿಯೊಳಗೆ ಓದುತ್ತಿದ್ದಾನೆ.ಹಾಗೆ ಓದಿ ಡಿಗ್ರಿ ಪಾಸು ಮಾಡಿದ್ದ ,ಮತ್ತೆ ಪತ್ರಿಕೋದ್ಯಮ ಡಿಪ್ಲೋಮಾಕ್ಕೆ ಫೀಸು ಕಟ್ಟಿ ಓದುತ್ತಿದ್ದ , ಈ ನಡುವೆ ಕಾನೂನು ಓದಬೇಕೆಂದು ವ್ಯವಸ್ಥೆ ಮಾಡುತ್ತಿದ್ದ ,ಆದರೆ ಅದಕ್ಕೊಂದು ಅನುಮತಿ ಜೈಲಲ್ಲಿ ಸಿಕ್ಕಿರಲಿಲ್ಲ.ಈತ ನಮ್ಮೂರಿನ ಪದ್ಮನಾಭ.

ಗುತ್ತಿಗಾರಿನ ಚತ್ರಪ್ಪಾಡಿ ಪದ್ಮನಾಭ ಅದ್ಯಾವುದೋ ಕಾರಣಕ್ಕೆ ಜೈಲು ಸೇರಿದ್ದ.ಆಗ ಆತನದು ಓದುವ ಪ್ರಾಯ.ಜೈಲು ಸೇರಿದ ನಂತರ ಓದುವುದಕ್ಕೆ ಸಾಧ್ಯವಾಗಿರಲಿಲ್ಲ.ಹಾಗಾಗಿ ಆತನ ಹಠ ಮುಂದುವರಿದಿತ್ತು ಜೈಲಲ್ಲಾದರೂ ಓದಲೇ ಬೇಕು ಅಂತ ನಿರ್ಧರಿಸಿ ಡಿಗ್ರಿಯವರೆಗೂ ಓದಿದ್ದ.ಆದರೆ ಕಾನೂನು ಓದಬೇಕೆಂಬ ಅವನ ಆಸೆಗೆ ಕಲ್ಲು ಬಿದ್ದಿತ್ತು.ಈ ವಿಷಯ ನನ್ನ ಕಿವಿಗೆ ಬಿದ್ದಿತ್ತು.ಹೀಗಾಗಿ ನಾನು ಉಷಾಕಿರಣಕ್ಕೆ ಸ್ಟೋರಿ ಮಾಡಿದೆ.ಅದು ರಾಜ್ಯಾದ್ಯಂತ “ ಜೈಲು ಹಕ್ಕಿಯ ಕಲಿಯುವಾಸೆಗೆ ಕಾನೂನು ತೊಡಕು “ ಎಂದು ಹೆಡ್ಡಿಂಗ್‌ನಲ್ಲಿ ಬಂದಿತ್ತು.ಇದೊಂದು ರೀತಿಯ ಸಂಚಲನ ಉಂಟುಮಾಡಿತ್ತು. ಇದರ ಜೊತೆಗೆ ಈಟಿವಿಯ ವಿನಾಯಕನೂ ಈ ಸ್ಟೋರಿ ಮಾಡಿದ , ಮತ್ತು ಹಾಯ್ ಬೆಂಗಳೂರಿನಲ್ಲೂ ಈ ವರದಿ ಬಂದಿತು. ಇದೆಲ್ಲದರಿಂದ ಈ ಸುದ್ದಿ ಇನ್ನಷ್ಟು ಸಂಚಲನ ಮೂಡಿಸಿತು. ಕೆಲವೇ ದಿನಗಳಲ್ಲಿ ಪದ್ಮನಾಭನ ಕಷ್ಠಕ್ಕೊಂದು ದಾರಿಯೂ ಸಿಕ್ಕಿತು.

ಅದಾಗಿ ಕೆಲ ಸಮಯದ ನಂತರ ಸಿಕ್ಕ ಪದ್ಮನಾಭ ಮತ್ತೆ ಅದೇ ವಿಷಯ ನೆನಪಿಸಿಕೊಡದ್ದು ಸಮಾಧಾನ ಎನಿಸಿತು.ನಮ್ಮ ಕೆಲಸವೂ ಸಾರ್ಥಕ ಎನಿಸಿತು.

15 November 2010

ಮಾಜಿಯ ಕತೆ. .

ಆವತ್ತೊಂದು ದಿನ ಹೀಗೆಯೇ ಗುತ್ತಿಗಾರು ಕಡೆಗೆ ಹೋಗಿದ್ದಾಗ ಯಾವುದೋ ಕಾರಣಕ್ಕೆ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ನೆನಪಾದರು.ಕೂಡಲೇ ಮಿತ್ರ ಗೋಪಾಲ ಚತ್ರಪ್ಪಾಡಿಯವರಲ್ಲಿ ಅವರ ಕುರಿತು ವಿಚಾರಿಸದಾಗ ಅವ್ರು ಮನೆಯಲಿದ್ದಾರೆ ಹೋಗೋಣ , ಅಂದ್ರು ತಕ್ಷಣವೇ ಅವರ ಮನೆಗೆ ಹೋದಾಗ ಮನೆಯಲ್ಲಿ ಅದೇನೋ ಯೋಚನೆಯಲ್ಲಿ ಕುಳಿತುಕೊಂಡಿದ್ದರು. ನಮ್ಮನ್ನು ನೋಡಿದ ತಕ್ಷಣವೇ , ಹೋ. . ಸ್ವಾಮಿ, ಬಲೆ . . ಅಂತ ಹೇಳಿ, ದಾನೆ ಬತ್ತರ್ ಎಂದು ವಿಚಾರಿಸಿದಾಗ , ನಿಮ್ಮ ಸ್ಥಿತಿಯ ಬಗ್ಗೆ ಪೇಪರಿಗೆ ನ್ಯೂಸ್ ಮಾಡಲು ಬಂದದ್ದು ಅಂತ ಹೇಳಿದೆ. ಅವರು ಎಲ್ಲಾ ಡೀಟೈಲ್ಸ್ ಕೊಟ್ರು. ಅದಾಗಿ ಎರಡು ದಿನದ ನಂತರ , ಗೋಪಾಲ್ ಫೋಟೋ ಕೊಟ್ಟ ಬಳಿಕ ಉಷಾಕಿರಣದಲ್ಲಿ ನ್ಯೂಸ್ ಬಂತು. “ಮಾಜಿ ಶಾಸಕರ ಕತೆ “ ಎಂಬ ಹೆಡ್ಡಿಂಗ್‌ನಲ್ಲಿ ಆ ನ್ಯೂಸ್ ಇತ್ತು. ಇಡೀ ಪತ್ರಿಕಾ ಬಳಗದಲ್ಲಿ ಅದು ಮೊತ್ತ ಮೊದಲ ಬಾರಿಗೆ ಮಾಜಿ ಶಾಸಕ ಹುಕ್ರಪ್ಪರ ಬಗ್ಗೆ ಬರೆದ ಸುದ್ದಿಯಾಗಿತ್ತು.

ಇದನ್ನು ನೋಡಿದ ಈಟಿವಿ ವಿನಾಯಕನೂ ಇಲ್ಲಿಗೆ ಬಂದ.ಜೊತೆಗೆ ಪ್ರವೀಣ ಕೂಡಾ. ನಾನು ಇವರಿಬ್ಬರನ್ನು ಅಲ್ಲಿಗೆ ಕರೆದೊಯ್ದೆ. ಆಗ ಮಾಜಿ ಶಾಸಕರು ಗೇರು ಬೀಜ ಕೊಯ್ಯಲು ಹೋಗಿದ್ದರು.ವಿನಾಯಕ ಇದನ್ನೆಲ್ಲಾ ಶೂಟ್ ಮಾಡಿ ಬಂದ. ನಮ್ಮ ಮನೆಗೆ ಆ ನ್ಯೂಸ್ ನಂತರ ಇಬ್ಬರೂ ಬಂದು ಈ ಸ್ಟೋರಿಗೆ ಸಂಬಂಧಪಟ್ಟಂತೆ ಮೊದಲ ಪಿಟುಸಿಯನ್ನೂ ವಿನಾಯಕ ನೀಡಿದ. ಒಂದು ವಾರದೊಳಗೇ ಈಟಿವಿಯಲ್ಲಿ ಹೆಡ್‌ಲೈನ್ ನ್ಯೂಸ್ ಆಗಿ ಪ್ರಚಾರವಾಯಿತು. ಇದರ ನಂತರ ಅನೇಕ ಚಾನೆಲ್ಲುಗಳು ಬಂದವು. ಕೆಲ ಪತ್ರಿಕೆಗಳು ಆ ಬಳಿಕ ಹೊಸ ರೂಪಕೊಟ್ಟು ಟ್ಯಾಪಿಂಗ್ ನಿರತ ಶಾಸಕ ಎಂದೂ ಬರೆದವು. ಹೀಗೇ ಒಂದೊಳ್ಳೆಯ ವಿಷಯವನ್ನು ಹೊರ ತೆಗದ ಬಳಿಕ ಇಂದಿಗೂ ಹುಕ್ರಪ್ಪರ ಬಗೆ ನ್ಯೂಸ್‌ಗಳು ಬರುತ್ತಲೇ ಇರುತ್ತದೆ. ಆದರೆ ಮೊದಲ ಬಾರಿಗೆ ಈ ಸುದ್ದಿಯನ್ನು ಹೊರತೆಗೆದನೆಂಬ ಖುಷಿ ನನಗಿತ್ತು.ಜೊತೆಗೆ ವಿನಾಯಕನಿಗೂ ಈ ಸ್ಟೋರಿ ಹೊಸ ಟರ್ನ್ ಕೊಟ್ಟಿತ್ತು. ಆ ನಂತರ ಎಲ್ಲಾ ಪತ್ರಿಕೆ ಈ ನ್ಯೂಸ್ ಮಾಡಿದ್ದರು.ಮೊದಲ ಬಾರಿಗೆ ಉಷಾಕಿರಣವು ಹುಕ್ರಪ್ಪರ ಸ್ಟೋರಿ ಪ್ರಕಟಿಸಿತ್ತು. ಹುಕ್ರಪ್ಪರು ಇಂದಿಗೂ ನಮ್ಮ ಈ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ.