ಆತ ಕೈದಿ.ಕಂಬಿಯೊಳಗೆ ಓದುತ್ತಿದ್ದಾನೆ.ಹಾಗೆ ಓದಿ ಡಿಗ್ರಿ ಪಾಸು ಮಾಡಿದ್ದ ,ಮತ್ತೆ ಪತ್ರಿಕೋದ್ಯಮ ಡಿಪ್ಲೋಮಾಕ್ಕೆ ಫೀಸು ಕಟ್ಟಿ ಓದುತ್ತಿದ್ದ , ಈ ನಡುವೆ ಕಾನೂನು ಓದಬೇಕೆಂದು ವ್ಯವಸ್ಥೆ ಮಾಡುತ್ತಿದ್ದ ,ಆದರೆ ಅದಕ್ಕೊಂದು ಅನುಮತಿ ಜೈಲಲ್ಲಿ ಸಿಕ್ಕಿರಲಿಲ್ಲ.ಈತ ನಮ್ಮೂರಿನ ಪದ್ಮನಾಭ.
ಗುತ್ತಿಗಾರಿನ ಚತ್ರಪ್ಪಾಡಿ ಪದ್ಮನಾಭ ಅದ್ಯಾವುದೋ ಕಾರಣಕ್ಕೆ ಜೈಲು ಸೇರಿದ್ದ.ಆಗ ಆತನದು ಓದುವ ಪ್ರಾಯ.ಜೈಲು ಸೇರಿದ ನಂತರ ಓದುವುದಕ್ಕೆ ಸಾಧ್ಯವಾಗಿರಲಿಲ್ಲ.ಹಾಗಾಗಿ ಆತನ ಹಠ ಮುಂದುವರಿದಿತ್ತು ಜೈಲಲ್ಲಾದರೂ ಓದಲೇ ಬೇಕು ಅಂತ ನಿರ್ಧರಿಸಿ ಡಿಗ್ರಿಯವರೆಗೂ ಓದಿದ್ದ.ಆದರೆ ಕಾನೂನು ಓದಬೇಕೆಂಬ ಅವನ ಆಸೆಗೆ ಕಲ್ಲು ಬಿದ್ದಿತ್ತು.ಈ ವಿಷಯ ನನ್ನ ಕಿವಿಗೆ ಬಿದ್ದಿತ್ತು.ಹೀಗಾಗಿ ನಾನು ಉಷಾಕಿರಣಕ್ಕೆ ಸ್ಟೋರಿ ಮಾಡಿದೆ.ಅದು ರಾಜ್ಯಾದ್ಯಂತ “ ಜೈಲು ಹಕ್ಕಿಯ ಕಲಿಯುವಾಸೆಗೆ ಕಾನೂನು ತೊಡಕು “ ಎಂದು ಹೆಡ್ಡಿಂಗ್‌ನಲ್ಲಿ ಬಂದಿತ್ತು.ಇದೊಂದು ರೀತಿಯ ಸಂಚಲನ ಉಂಟುಮಾಡಿತ್ತು. ಇದರ ಜೊತೆಗೆ ಈಟಿವಿಯ ವಿನಾಯಕನೂ ಈ ಸ್ಟೋರಿ ಮಾಡಿದ , ಮತ್ತು ಹಾಯ್ ಬೆಂಗಳೂರಿನಲ್ಲೂ ಈ ವರದಿ ಬಂದಿತು. ಇದೆಲ್ಲದರಿಂದ ಈ ಸುದ್ದಿ ಇನ್ನಷ್ಟು ಸಂಚಲನ ಮೂಡಿಸಿತು. ಕೆಲವೇ ದಿನಗಳಲ್ಲಿ ಪದ್ಮನಾಭನ ಕಷ್ಠಕ್ಕೊಂದು ದಾರಿಯೂ ಸಿಕ್ಕಿತು.
ಅದಾಗಿ ಕೆಲ ಸಮಯದ ನಂತರ ಸಿಕ್ಕ ಪದ್ಮನಾಭ ಮತ್ತೆ ಅದೇ ವಿಷಯ ನೆನಪಿಸಿಕೊಡದ್ದು ಸಮಾಧಾನ ಎನಿಸಿತು.ನಮ್ಮ ಕೆಲಸವೂ ಸಾರ್ಥಕ ಎನಿಸಿತು.