28 November 2010

ಸುದ್ದಿಗಾಗಿ ಕುಮಾರಪರ್ವತ ಹತ್ತಿದೆವು . !

ಆಗ ನನ್ನಲ್ಲಿ ಕ್ಯಾಮಾರಾ ಇದ್ದಿರಲಿಲ್ಲ.ಯಾವುದಾದ್ರೂ ಫೋಟೋ ಬೇಕಾದ್ರೆ ಸುಬ್ರಹ್ಮಣ್ಯದ ಶಾಂತಲಾ ಸ್ಟುಡಿಯೋದ ಲೋಕೇಶ ಅವರನ್ನು ಕರೆದುಕೊಂಡು ಹೋಗುತ್ತಿದ್ದೆ. ನಮ್ಮಂತೆ ಅವರಿಗೂ ಆಗ ಇದೊಂದು ರೀತಿಯ ಥ್ರಿಲ್. ಇದೇ ರೀತಿಯ ಥ್ರಿಲ್‌ನಿಂದಾಗಿಯೇ ನಾವೊಮ್ಮೆ ಕುಮಾರಪರ್ವತದ ಗಿರಿಗದ್ದೆಯವರೆಗೆ ಹೋಗಿದ್ದೆವು.ಆದರೆ ಆ ಸ್ಟೋರಿ ಮಾತ್ರಾ ಬಂದದ್ದು ಒಳ ಪುಟದಲ್ಲಿ , ಅದೂ ಚಿಕ್ಕದಾಗಿ. .!.

ಅಂದು ಯಾವ ವಾರ ಅಂತ ನೆನಪಿಲ್ಲ.ಸುಬ್ರಹ್ಮಣ್ಯಕ್ಕೆ ಹೋಗಿದ್ದೆ. ಅದ್ಯಾಕೋ ಕುಮಾರಪರ್ವತ ಚಾರಣ ಮಾಡುವವರಿಗೆ ಅಲ್ಲಿ ಅರಣ್ಯ ಇಲಾಖೆ ಭಾರೀ ಫೀಸು ತೆಗೀತಾರೆ ಎಂಬ ವಿಷಯ ನೆನಪಾಯಿತು. ಕೂಡಲೇ ಲೋಕೇಶ್‌ಗೆ ಫೋನು ಮಾಡಿದಾಗ ಇವತ್ತು ಫ್ರೀ ಇದ್ದೇನೆ ಅಂತ ಹೇಳಿದ್ರು. ಗಿರಿಗದ್ದೆಗೆ ಹೋವುವನ ಎಂದು ಕೇಳಿದ್ದೇ ತಡ. ರೆಡಿ ಅಂತ ಕ್ಯಾಮಾರ ಹೆಗಲಿಗೆ ಹಾಕಿಕೊಂಡು ಬಂದೇ ಬಿಟ್ಟರು. ಸರಿ ನಮ್ಗೆ ಸುಮಾರು 3 ಗಂಟೆ ಬೇಕಾಗಬಹುದು ಅಂತ ಯೋಚಿಸಿ ತಿಂಡಿ , ನೀರು ತೆಕ್ಕೊಂಡು ನಾನು ಮತ್ತು ಲೋಕೇಶ್ ಗಿರಿಗದ್ದೆ ಬೆಳಗ್ಗೆ 10.30 ರ ಸುಮಾರಿಗೆ ಹೊರಟೆವು. ಸುಮಾರು 2.30 ತಾಸು ನಡೆದಾಗ ಗಿರಿಗದ್ದೆ ಬಂತು. ಅಬ್ಬಾ ಅಂತ ಗಿರಿಗದ್ದೆ ಭಟ್ಟರ ಮನೆಗೆ ಹೋಗಿ ನೀರು ಕುಡಿದು, ಈಗ ಬರ್ತೇವೆ ಅಂತ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ಗೆ ಹೋದೆವು.ಮೊದಲೇ ನಾವು ಮಾತನಾಡಿದಂತೆ ನಾನು ಅರಣ್ಯ ಸಿಬ್ಬಂದಿಗಳ ಜೊತೆ ಮಾತನಾಡೋದು , ಲೋಕೇಶ ಫೋಟೋ ತೆಗೆಯೋದು. ಹಾಗೇ ಎಲ್ಲವೂ ಆಯಿತು. ನಮ್ಮ ಕೆಲಸ ಆದ ನಂತರ ಗಿರಿಗದ್ದೆಯಲ್ಲಿ ಊಟ ಮಾಡಿ . ಅವರದ್ದೂ ಫೋಟೋ ತೆಕ್ಕೊಂಡು ಸುಬ್ರಹ್ಮಣ್ಯಕ್ಕೆ ತಲಪೋವಾಗ 5.30. ಆ ನಂತ್ರ ಮನೆಗೆ.

ಆ ಸುದ್ದಿ ಕಳುಹಿಸಿದೆ. ಆದರೆ ಅದು ಬಂದದ್ದು ಮಾತ್ರಾ ಲೋಕಲ್ ಎಡಿಶನ್‌ನ ಒಳಗಿನ ಪುಟದಲ್ಲಿ.ತುಂಬಾ ಬೇಸರವಾಗಿತ್ತು. ಆದರೆ ಬಿಡಿ , ಅದೇ ಸ್ಟೋರಿಯನ್ನು ಒಂದು ತಿಂಗಳ ನಂತರ ಸ್ಟೇಟ್ ಪೇಜ್‌ಗೆ ಹಾಕಬೇಕು ಅಂತ ಹೇಳಿ ಹಾಕಿಸಿದ್ದೆ. ಅದು ಬೇರೆ. ನಾವು ಅಷ್ಟು ದೂರ ನಡೆದುಕೊಂಡು ಹೋಗಿ ಒಂದೊಳ್ಳೆ ಸ್ಟೋರಿ ಕೊಟ್ರೆ ಅದು ಠುಸ್ ಆದಾಗ ಹೇಗಾಗಬೇಡ?. ಸ್ಥಳಕ್ಕೆ ಹೋಗದೇ ಬರೆಯೋರು ಎಷ್ಟು ಜನ ಇಲ್ಲ. ಅಂತಹದ್ದರಲ್ಲಿ ನಾವು ಹೋಗಿ ಬರೆದರೂ ಹೀಗಾಯಿತಲ್ಲ ಎಂದು ಬೇಸರವಾಗಿತ್ತು ಆಗ.

ನಂಗಂತೂ ಆಗ ಲೋಕೇಶ್‌ನ ಆಸಕ್ತಿಗೆ ಖುಷಿಯಾಗಿತ್ತು.ನಾವು ಹಣವೂ ಆಗ ಅವರಿಗೆ ಕೊಡುವುದು ಕಡಿಮೆ.ಯಾವಾಗಲಾದರೂ ಕೊಡುತ್ತಿದ್ದೆವು.ಅದೂ ಅವರ ಶ್ರಮಕ್ಕೆ ಸಾಲದು.ಅವರ ಸಹಕಾರ ನಮಗೆ ಯಾವಾಗಲೂ ಇದ್ದೇ ಇತ್ತು.ಅದಕ್ಕೆ ನಾವು ಬೆಲೆ ಕಟ್ಟಲಾದೀತೇ?.ಹಾಗಾಗಿ ಲೋಕೇಶನಿಗೆ ಇವತ್ತೂ ಒಂದು ಥ್ಯಾಕ್ಸ್ ಇದೆ. ಈಗ ಲೋಕೇಶ್ ಪ್ರಜಾವಾಣಿಗೆ ನ್ಯೂಸ್ ಬರೀತಾರೆ. ಹಾಗಾಗಿ ನಮ್ಮತ್ರ ಇರೋ ಫೋಟೋ ಈಗ ಅವರಿಗೂ ಕಳುಹಿಸುತ್ತೇನೆ.ಏನಿದ್ದರೂ ಅವರಿಗೊಂದು ಫೋನು ಮಾಡೇ ಮಾಡ್ತೇನೆ.ಥ್ಯಾಂಕ್ಸ್ ಲೋಕೇಶ್.




ಆವತ್ತು ಲೋಕೇಶ ಕ್ಲಿಕ್ಕಿಸಿದ ಚಿತ್ರ ಇದು . .