28 November 2010

ಸಚಿನ್ ಬಂದ್ರು . . !




ಆವತ್ತು 2006 ಮೇ 6.

ಕ್ರಿಕೆಟ್ ಕಲಿ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

ಆಗ ರಾತ್ರಿ 9.30 ರ ಹೊತ್ತು.ನೇರವಾಗಿ ಲಾಡ್ಜ್‌ಗೇ ಬಂದ ಸಚಿನ್ ವಿಶ್ರಾಂತಿ ಪಡೆದಿದ್ದರು. ಈಟಿವಿಯಿಂದ ವಿನಾಯಕನೂ ಬಂದಿದ್ದ.ನಾವಿಬ್ಬರೂ ಅಂದು ರಾತ್ರಿ ಸುಬ್ರಹ್ಮಣ್ಯದಲ್ಲೇ ಇದ್ದೆವು. ಸಚಿನ್‌ದು ಸರ್ಪಸಂಸ್ಕಾರ. ಹಾಗಾಗಿ ಅವರು 3 ದಿನಗಳ ಕಾಲ ಕುಕ್ಕೆಯಲ್ಲೇ ಇರಬೇಕು.ಅಂದು ರಾತ್ರಿ ಯಾವುದೇ ಘಟನೆಗಳು ನಡೆಯಲಿಲ್ಲ.ಒಂದೆರಡು ಸಾಲಿನ ಸುದ್ದಿ ಅಷ್ಟೇ.ಯಾಕೆಂದರೆ ಅವರು ಧರ್ಮಸ್ಥಳಕ್ಕೆ ಬಂದು ಕುಕ್ಕೆಗೆ ಬಂದಿದ್ದರು.

ಬೆಳಗ್ಗೆ 6 ಗಂಟೆ.

ಸಚಿನ್ ರೂಂನಿಂದ ಹೊರಬಂದಿರಲಿಲ್ಲ.ವಿನಾಯಕ ನನಗೆ ಮೇಲಿನಿಂದ ಮೇಲೆ ಫೋನು ಮಾಡುತ್ತಲೇ ಇದ್ದ."ಏ ಅಣ್ಣಾ ಎಲ್ಲಿದ್ದ ಬಾ ಅಂತ . ." ಹೇಳುತ್ತಲೇ ಇದ್ದ. ಅಂತೂ 6.30 ಕ್ಕೆ ಸುಬ್ರಹ್ಮಣ್ಯಕ್ಕೆ ತಲಪಿದೆ. ಅಂತೂ ಸಚಿನ್ 7 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೊರಟರು. ನಾನು ಮತ್ತು ವಿನಾಯಕ ಇಬ್ಬರೂ ಸಚಿನ್‌ನ ಹಿಂದು ಮುಂದು ಹೋಗಿ ವಿಷುವಲ್ ಫೋಟೂ ತೆಗೆದುಕೊಂಡೆವು.ಜೊತೆಗೆ ಇನ್ನೂ ಅನೇಕ ಮಾಧ್ಯಮದ ಮಂದಿ ಇದ್ದರು. ಮಂಗಳೂರಿನಿಂದಲೂ ಅನೇಕರು ಬಂದಿದ್ದರು. ಸಚಿನ್‌ರದ್ದು ಪೂಜೆ ಮುಗೀತು.ಅವರು ಯಾವ ಮಾಧ್ಯಮದ ಮಂದಿಯಲ್ಲೂ ಮಾತನಾಡಿರಲಿಲ್ಲ.ನಮ್ಮ ಪತ್ರಿಕೆಯಿಂದಲೂ ಮಂಗಳೂರಿನಿಂದ ಬಂದಿದ್ದರು.ಆದರೆ ವರದಿಯ ಉಸ್ತುವಾರಿ ನನಗಿತ್ತು.ಅಂತೂ ಮಧ್ಯಾಹ್ನದ ಸಮಯಕ್ಕೆ ನಾನು ಬೇರೊಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ.ಸಂಜೆ ಬಂದು ನಾನು ಸಚಿನ್ ಸುದ್ದಿಯನ್ನೂ ಕಳುಹಿಸಿದೆ. ಯಾರಲ್ಲೂ ಮಾತಾಡಿಲ್ಲ ಅಂತಾನೂ ಆಫೀಸಿಗೆ ಹೇಳಿದೆ.

ಮರುದಿನ ನನ್ನ ಬೈಲೈನ್ ಹಾಕಿ ನ್ಯೂಸ್ ಬಂದಿದೆ.

ಆದರೆ ಅದು ಎಲ್ಲವೂ ನಾನು ಬರೆದ ಸುದ್ದಿಯಾಗಿರಲಿಲ್ಲ.ಸ್ವಲ್ಪ ಹೊತ್ತಿನ ನಂತರ ನಮ್ಮ ಮಂಗಳೂರು ಪ್ರತಿನಿಧಿಯಿಂದ ಫೋನು ಬಂತು.ನೀವ್ಯಾಕೆ ನ್ಯೂಸ್ ಕಳುಹಿಸಿದ್ದು,ನನ್ನ ನ್ಯೂಸ್‌ಗೆ ನಿಮಗೆ ಬೈಲೈನ್ ಹಾಕಿದಾರೆ ಎಂದು ಹೇಳಿದರು.ಅದಕ್ಕೆ ನನಗೇನು ಗೊತ್ತಿಲ್ಲ ,ನಾನು ಕೂಡಾ ನ್ಯೂಸ್ ಕಳುಹಿಸಿದ್ದೆ ಎಂದು, ನಂತರ ಆಫೀಸಿಗೆ ಕೇಳಿದೆ."ಹೋ . .. ಹಾಗಾಯಿತಾ. . ". ಎಂದು ಕೇಳಿದರು.ಮತ್ತೇನಾಯಿತು ಗೊತ್ತಿಲ್ಲ. .

ಅಂದಿನ ದಿನ ಹಾಗಾದರೆ ನಾನು ಮತ್ತು ವಿನಾಯಕ ಮೂರನೇ ದಿನ ಬೆಳಗಿನಿಂದಲೇ ಸಚಿನ್‌ರನ್ನು ಮಾತನಾಡಿಸಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆವು. ಆದರೆ ಸಂಜೆಯವರೆಗೂ ಸಿಕ್ಕೇ ಇಲ್ಲ.ಮಾತನಾಡಿಯೇ ಇಲ್ಲ.ಸಚಿನ್ ಕುಕ್ಕೆಯಿಂದ ಹೋಗೇ ಬಿಟ್ಟರು.ಆದರೆ ಮರುದಿನ ನೋಡಿದ್ರೆ ಒಂದೆರಡು ಪ್ರಮುಖ ಪತ್ರಿಕೆಯಲ್ಲಿ ಸಚಿನ್ ಹೇಳಿಕೆ ಇತ್ತು. ನಾನು ಮುಂದಿನ ಪ್ರವಾಸಕ್ಕೆ ಸಿದ್ದ ಎಂಬುದು ಅದರ ಸಾರಾಂಶ. ಈ ನ್ಯೂಸ್ ದೇಶದಾದ್ಯಂತ ಪಿಟಿ‌ಐ ಮೂಲಕ ಹೋಯಿತು.

ಸಚಿನ್ ಮುಂಬಯಿಗೆ ತಲುಪುತ್ತಿದ್ದಂತೆಯೇ ಕ್ರೀಡಾ ಚಾನೆಲ್‌ವನರು ಲೋಗೋ ಹಿಡಿದು ಕೇಳಿದ್ರು ,ನೀವು ಸುಬ್ರಹ್ಮಣ್ಯದಲ್ಲಿ ಮುಂದಿನ ಪ್ರವಾಸಕ್ಕೆ ರೆಡಿ ಅಂದ್ರಲ್ಲ ?. ಅಂತ ಪ್ರಶ್ನೆ ಮಾಡಿದ್ರು. ಆಗ ಸಚಿನ್ ಅಂದ್ರು , ನಾನು ಅಲ್ಲಿ ಯಾರಲ್ಲೂ , ಯಾವುದೇ ಮೀಡಿಯಾದಲ್ಲೂ ಮಾತಾಡಿಲ್ಲ , ಇದು ಮಾಧ್ಯಮದ್ದೇ ಸೃಷ್ಠಿ ಅಂತಂದ್ರು . .!.

ಮತ್ತೆ ಗೊತ್ತಾಯಿತು , ಸ್ವಾಮೀಜಿಗಳಲ್ಲಿ ಸಚಿನ್ ಹಾಗೇ ಹೇಳಿದ್ದಾರಂತೆ ಅದನ್ನು ಅವರು ಬೇರೆಯವರಲ್ಲಿ ಕೇಳಿ ಬರೆದದ್ದು ಅಂತ . . .!. ವಾಸ್ತವವಾಗಿ ಸಚಿನ್ ಹಾಗೆ ಹೇಳಿದ್ದರೋ ಅಲ್ಲ ಆ ಪತ್ರಕರ್ತರೇ ಸೃಷ್ಠಿ ಮಾಡಿದ್ದೋ ಗೊತ್ತಿಲ್ಲ. ಅಲ್ಲಾ ಇವರಿಗೇನು ಕೇಳಿತ್ತೋ ಗೊತ್ತಿಲ್ಲ. ಅಂತೂ ಸಚಿನ್‌ಗೆ ಇಲ್ಲಿನ ಮೀಡಿಯಾ ಹೇಗೆ ಅಂತ ಗೊತ್ತಾಗಿರಬಹುದು . .! ಅಂತೂ ಹೀಗೂ ಮಾಡಲಾಗುತ್ತೆ ಅಂತ ಹೊಸದೊಂದು ತಂತ್ರ ಗೊತ್ತಾಯಿತು.ಸುದ್ದಿಗಾಗಿ ಸುದ್ದಿ ಮಾಡೋದು , ಸುದ್ದಿಯ ಹಪಹಪಿ ಹೇಗಿರುತ್ತೆ ಅನ್ನೋದು ಕೂಡಾ ಗೊತ್ತಾಯ್ತು . .!.