02 February 2011

ದೃಶ್ಯ ಮಾಧ್ಯಮದ ಮೊದಲ ಸುದ್ದಿ -ಮೊದಲ ಫೋನ್ ಇನ್

ವಿವಿದ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದುದರ ಜೊತೆಗೆ ಕೃಷಿ ಚಟುವಟಿಕೆಯೂ ಮುಂದುವರಿದಿತ್ತು. ಇದೇ ವೇಳೆ ದೃಶ್ಯ ಮಾಧ್ಯಮವು ಬೆಳೆಯುವ ಕಾಲ ಅದಾಗಿತ್ತು. ಗೆಳೆಯ ವಿನಾಯಕನೊಂದಿಗೆ ಈಟಿವಿಗಾಗಿ ಹಲವಾರು ಕಡೆ ಸುತ್ತಾಡಿದ ಅನುಭವವೂ ಇತ್ತು.ಆಗಲೇ ಈ ಇಲೆಕ್ಟ್ರಾನಿಕ್ ಮೀಡಿಯಾದ ಹುಚ್ಚು ಬೆಳೆದಿತ್ತು.ಆಗ ಈಟಿವಿ ಮತ್ತು ಉದಯ ಟಿವಿ ಹೆಚ್ಚು ಜನಪ್ರಿಯವಾಗಿತ್ತು.

ಆ ನಂತರ ಆಗ ತಾನೆ ನ್ಯೂಸ್ ಚಾನೆಲ್ ಆಗಿ ಟಿವಿ9 ಬಂದಿತ್ತು. ಆದಾಗಿ ಕೆಲವೇ ಸಮಯದಲ್ಲಿ ಸುವರ್ಣ ವಾಹಿನಿ ಬಂದಿತು.ಜೊತೆ ಜೊತೆಗೇ ಸುವರ್ಣ ನ್ಯೂಸ್ ಚಾನೆಲ್ ಕೂಡಾ ಬಂದಿತು.ಅದರ ಚಾನೆಲ್ ಮುಖ್ಯಸ್ಥರಾಗಿ ಶಶಿಧರ್ ಭಟ್ ಅವರಿದ್ದರು. ಇವರನ್ನು ನಾನು ಮೊದಲೇ ಬಲ್ಲವನಾಗಿದ್ದೆ. ಮೊದಲು ಈಟಿವಿಗೆ ಭಾನಾಮತಿ ಕಾರ್ಯಕ್ರಮವನ್ನು ಭಟ್ ಸರ್ ಮತ್ತು ಅವರ ಪತ್ನಿ ಉಷಾ ಮೇಡಂ ಅವರು ನಡೆಸಿಕೊಡುತ್ತಿದ್ದಾಗ ಅವರಿಗಾಗಿ ಕೆಲವೊಂದು ಕಾರ್ಯಕ್ರಮಗಳನ್ನು ನೀಡಿದ್ದೆ. ಮತ್ತು ನನ್ನ ಚಟುವಟಿಕೆಗಳನ್ನು ಅವರು ಹತ್ತಿರದಿಂದ ಬಲ್ಲವರಾಗಿದ್ದರು.ಹೀಗಾಗಿ ನನ್ನ ಕನಸಿಗೆ ಜೀವ ಬಂದಿತ್ತು. ಅದು ನನಸಾಗುವ ದಿನವೂ ಹತ್ತಿರ ಬಂದಿತ್ತು.

೨೦೦೮ ಜೂನ್ ೨೬ರ ಹೊತ್ತಿಗೆ ಮಂಗಳೂರು ಬ್ಯೂರೋದ ಪುತ್ತೂರು ವರದಿಗಾರನಾಗಿ ಅಂದರೆ ಮೊದಲು ಬಿಡಿಸುದ್ದಿ ವರದಿಗಾರನಾಗಿಯೇ ಕೆಲಸಕ್ಕೆ ಸೇರಿಕೊಂಡೆ. ಒಂದು ವರ್ಷದ ನಂತರ ಜಿಲ್ಲಾ ವರದಿಗಾರನಾಗಿ ಭಡ್ತಿಯಾದ್ದು. ನನ್ನ ಆಸೆ ಇದ್ದುದು ಅದೇ. ಒಬ್ಬ ಗ್ರಾಮೀಣ ವರದಿಗಾರನಾಗಿ ಹಳ್ಳಿ ಸುದ್ದಿಗಳನ್ನು , ಇಲ್ಲಿನ ವಿಶೇಷತೆಗಳನ್ನು ಹೊರ ಜಗತ್ತಿಗೆ ನೀಡಬೇಕು ಎಂಬ ಆಸೆ ಇತ್ತು.ಸಂಬಳದ ಬಗ್ಗೆ ಆಗ ಯೋಚನೆ ಇದ್ದಿರಲಿಲ್ಲ. ಒಬ್ಬ ಗ್ರಾಮೀಣ ಟಿವಿ ವರದಿಗಾರನಾಗಬೇಕು, ಹಳ್ಳಿಗೇನಾದರೂ ಪ್ರಯೋಜನವಾಗಬೇಕು ಎಂಬ ಒಂದೇ ಉದ್ದೇಶ ಇತ್ತು.ಅದಕ್ಕೆ ಶಶಿಧರ್ ಭಟ್ ಅವರು ಅವಕಾಶವನ್ನೂ ನೀಡಿದರು. ಹೀಗೆ ಅವರು ಕೊಟ್ಟ ಅವಕಾಶವನ್ನು ಸರಿಯಗಿ ಬಳಸಿಕೊಳ್ಳುವ ನಿರ್ಧಾರದೊಂದಿಗೆ ಊರಿಗೆ ಬಂದು ಕ್ಯಾಮಾರ ಖರೀದಿಸಿ ಕೆಲಸ ಸುರು. ಆರಂಭದಲ್ಲಿ ಕ್ಯಾಮಾರ ನಾವೇ ಖರೀದಿಸಬೇಕಿತ್ತು.ಕೆಲ ದಿನಗಳವರೆಗೆ ಮಿತ್ರ ಸುಬ್ರಹ್ಮಣ್ಯದ ಲೋಕೇಶ ಬಳ್ಳಡ್ಕರವರ ಕ್ಯಾಮಾರದಲ್ಲಿ ಕೆಲಸ ಶುರು.ಅವರೂ ಜೊತೆಗೆ ಬಂದು ವೀಡಿಯೋದ ಮಾಹಿತಿಗಳನ್ನು ಹೇಳಿಕೊಟ್ಟರು. ಅದರಂತೆ ಸುಳ್ಯದ ಹಳ್ಳಿ ಪ್ರದೇಶವಾದ ನಡುಗಲ್ಲಿನ ಪ್ರದೇಶದಲ್ಲಿ ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿ ಕೃಷಿ ನಾಶಪಡಿಸಿದ್ದರ ಬಗ್ಗೆ ಒಂದು ಸ್ಟೋರಿ ಮಾಡಿ ಅದಕ್ಕೊಂದು ಪಿ2ಸಿ ಕೊಟ್ಟು ಕ್ಯಾಸೆಟ್ ಮಂಗಳೂರಿಗೆ ಕಳುಹಿಸಿ ಸ್ಕ್ರಿಪ್ಟ್ ಫ್ಯಾಕ್ಸ್ ಮಾಡಿಯಾಗಿತ್ತು. ಆಗ ವಿಶುವಲ್ ಕಳುಹಿಸಲು ವ್ಯವಸ್ಥೆಗಳಿಲ್ಲ. ವೀಡಿಯೋ ತೆಗೆದು ಮಂಗಳೂರಿಗೆ ಬಸ್ಸಿನಲ್ಲಿ ಕಳುಹಿಸಬೇಕು.ಅಲ್ಲಿಗೆ ಆಫೀಸಿನ ಹುಡುಗರು ಬಂದು ಕ್ಯಾಸೆಟ್ ಪಡೆದು ವಿಶುವಲ್ ಬೆಂಗಳೂರಿಗೆ ಕಳುಹಿಸಬೇಕಾಗಿತ್ತು.

ಅದಾದ ನಂತರ ಇನ್ನೊಂದು ದಿನ ಹಳ್ಳಿ ಪ್ರದೇಶವಾದ ಪಂಬೆತ್ತಾಡಿಯಲ್ಲಿ ಇಲಿ ಜ್ವರದ ಕುರಿತು ಸ್ಟೋರಿ ಮಾಡಿ ಕ್ಯಾಸೆಟ್ ಕಳುಹಿಸಿ ಸ್ಕ್ರಿಪ್ಟ್ ಮಾಡಿ ಕಳುಹಿಸಿ ಹೊಸ ಕ್ಯಾಮಾರ ಕಳುಹಿಸಲು ಬೆಂಗಳೂರಿಗೆ.ಅಲ್ಲಿ
ನನ್ನ ಮಿತ್ರ ಆದರ್ಶನೊಂದಿಗೆ ಬಜಾರ್‌ಗಳಿಗೆ ತೆರಳಿ ಪ್ಯಾನಸಾನಿಕ್ ಕ್ಯಾಮಾರವನ್ನು ೨೬ ಸಾವಿರ ನೀಡಿ ಖರೀದಿ ಮಾಡಿದ ನಂತರ ಸ್ಟೋರಿ ಸುರು. ಕ್ಯಾಮಾರ ಖರೀದಿಗೆ ಹೋದ ದಿನದಂದೇ ಇಲಿ ಜ್ವರದ ಸ್ಟೋರಿ ಏರ್ ಆಗುತ್ತಾ ಇತ್ತು.ಅದಕ್ಕೆ ನನ್ನ ಮೊದಲ ಫೋನ್ ಇನ್ ಕೂಡಾ ಇದ್ದಿತ್ತು. ಆ ಬಳಿಕ ಸ್ಟೋರಿಗಳ ಬೇಟೆ ಆರಂಭವಾಯಿತು.ಕ್ಯಾಮಾರಾ ಖರೀದಿಗೆ ಮುನ್ನ ಲೋಕೇಶ್ ನನ್ನೊಂದಿಗೆ ಹಲವಾರು ಬಾರಿ ಸಹಾಯಕ್ಕೆ ಬಂದಿದ್ದರು.ವೀಡಿಯೋ ತೆಗೆಯುದಕ್ಕಾಗಿ. ಒಮ್ಮೆ ಲೋಗೋದ ಮೂಲಕ ವಾಯ್ಸ್ ರೆಕಾರ್ಡ್ ಮಾಡಲು ಪಟ್ಟ ಪಾಡು ಹೇಳತೀರದು. ಯಾಕಂದ್ರೆ ಲೋಕೇಶನಲ್ಲಿರೋ ಇನ್‌ಪುಟ್ ಜಾಕ್ ಕ್ಯಾಮಾರಕ್ಕೆ ಆಗೋದಿಲ್ಲ. ಅದಕ್ಕಾಗಿ ಇನ್ನೊಂದು ಮೈಕ್ ಅಂಗಡಿಯಿಂದ ಕೇಬಲ್ ತಂದು ಆ ನಂತರ ಹೋದದ್ದೂ ಇದೆ. ಹೀಗೆ ವಿದ್ಯುನ್ಮಾನ ವರದಿಗಾರಿಕೆ ಆರಂಭದಲ್ಲೇ ಸವಾಲಾಯಿತು. ಆದರೆ ಆ ನಂತರ ಇದೆಲ್ಲಾ ಸಲೀಸಾಯಿತು. ಆ ಬಳಿಕ ಇಡೀ ಕ್ಷೇತ್ರದೊಳಕ್ಕೆ ನುಗ್ಗಲು ಕಾರಣವಾಯಿತು.ಇದಕ್ಕೆ ಅವಕಾಶ ಮಾಡಿಕೊಟ್ಟ ಶಶಿಧರ್ ಭಟ್ , ಉಷಾ ಮೇಡಂ ಅವರನ್ನು ಸದಾ ನೆನಪಿಸುವುದರ ಜೊತೆಗೆ ಆರಂಭದಲ್ಲಿ ಈ ಫೀಲ್ಡ್‌ನಲ್ಲಿ ಸಹಕರಿಸಿದ ಲೋಕೇಶ್ ಬಳ್ಳಡ್ಕ , ಪುತ್ತೂರಿನ ಮಿತ್ರರುಗಳಾದ ಪ್ರವೀಣ್ ಕುಮಾರ್ ಮತ್ತು ಅಜಿತ್‌ರನ್ನು ನೆನಪಿಸಿಕೊಳ್ಳುತ್ತೇನೆ.