27 December 2010

ಕಲ್ಲು ಶೊಧಕ್ಕೆ ಇಳಿದಾಗ . . .

ಅದು ಕೊಲ್ಲಮೊಗ್ರದ ಕೂಜಿಮಲೆ ಪ್ರದೇಶ.ಕೆಂಪು ಕಲ್ಲು ಹೇರಳವಾಗಿ ಸಿಗೋ ಸ್ಥಳ.ಇದನ್ನು ಅಕ್ರಮವಾಗಿ ಅದೆಷ್ಟೋ ಮಂದಿ ತೆಗೆಯುತ್ತಾರೆ.ಈ ಕುರಿತಾಗಿ "ಹೊಸದಿಗಂತ"ಕ್ಕೊಂದು ವಿಶೇಷ ವರದಿಗೆ ಸಿದ್ದತೆ ನಡೆಸಿ ಗುತ್ತಿಗಾರಿನ ಫೋಟೋ ಗ್ರಾಫರ್ ಗೋಪಾಲ್ ಚತ್ರಪ್ಪಾಡಿಯವರೊಂದಿಗೆ ಅತ್ತ ಕಡೆ ಹೆಜ್ಜೆ.

ಗುತ್ತಿಗಾರಿನಿಂದ ಹೊರಟು ಕೊಲ್ಲಮೊಗ್ರಕ್ಕೆ ಹೋಗಿ ಅಲ್ಲಿ ಸ್ಕೂಟರ್ ಇರಿಸಿ ಕಾಲ್ನಡಿಗೆ ಶುರು.ನಮಗೆ ದಾರಿಗಾಗಿ ಅಲ್ಲಿನ ಒಬ್ಬ ಹುಡುಗ.ಅಬ್ಬಾ . .! ಸರಿ ಸುಮಾರು ಒಂದು ಗಂಟೆಗಳ ಕಾಲದ ಏರುಹಾದಿಯಲ್ಲಿ ಸಾಗಿದಾಗ ಸಿಕ್ಕಿತು ಕೂಜಿಮಲೆ.ಮಹೇಶಣ್ಣ ಮಾತಾಡ್ಬೇಡಿ ಅಲ್ಲಿ ಫಾರೆಸ್ಟ್‌ನವರಿದ್ದಾರೆ ಎಂದರು ಗೋಪಾಲ್.ನಿಶ್ಯಬ್ದವಾಗಿ ಹೋಗಿ ಫೋಟೋ ತೆಕ್ಕೊಂಡು ಬಂದಾಗ ಫಾರೆಸ್ಟ್‌ವನರು ಯಾರಲ್ಲಿ ಇಲ್ಲಿಗೆ ಬನ್ನಿ ಅಂತಂದ್ರು. ಸರಿ ಬರ್ತೇವೆ ಅಂತ ಕೆಳಗೆ ಹೋದೆವು. ಅಬ್ಬಾ . !, ಒಬ್ಬನಿಗೆ ಆ ಮಧ್ಯಾಹ್ನವೇ ಫುಲ್ "ಲೋಡ್" ಆಗಿತ್ತು. ಇನ್ನೊಬ್ಬ ನಮ್ಮನ್ನು ವಿಚಾರಿಸಿದ. ಎಲ್ಲಾ ಡೀಟೈಲ್ಸ್ ಕೊಟ್ಟಾಯ್ತು. ನನ್ನ ಐಡಿ ಚೆಕ್ ಮಾಡಿದ. ನಾವು ಮಾಧ್ಯಮದವರು ಅಂತ ಗೊತ್ತಾಯ್ತು. ಸರಿ ಇಲ್ಲೇನು ಆಗ್ತಾ ಇಲ್ಲ. ಸುಮ್ಮನೆ ನ್ಯೂಸ್ ಮಾಡ್ಬೇಡಿ ಅಂದ ಆ ಫಾರೆಸ್ಟ್ .ಓಕೆ ಅಂದ ನಾನು ಅಲ್ಲಿಂದ ಹೊರಟೆವು.

ನಮ್ಮೊಂದಿಗೆ ಬಂದಿದ್ದ ಆ ಹುಡುಗ ಹೇಳಿದ ಇಲ್ಲಿ ಯಾವಾಗಲೂ ಕಲ್ಲು ವ್ಯಾಪಾರ ಆಗ್ತಾನೇ ಇರ್ತದೆ ಇವರದ್ದೇ ಎಲ್ಲಾ ವ್ಯವಸ್ಥೆ ಅಂತ ಹೇಳಿದ. ಮೇಲಾಧಿಕಾರಿಗಳು ಬರೋವಾಗ ಇಲ್ಲಿಗೆ ಮೆಸೇಜ್ ಬರುತ್ತೆ.ಕೆಳಗೊಂದು ಬಾಂಬ್ ಸಿಡಿಯುತ್ತೆ.ಅದು ಅಧಿಕಾರಿಗಳು ಬರೋ ಸಿಗ್ನಲ್ ಅಂದ ಆತ.ಈ ಸಿಗ್ನಲ್ ಆಧಾರದಲ್ಲಿ ಇವರು ಕೆಲಸ ಮಾಡ್ತಾರೆ ಎಂದು ವಿವರಿಸಿದ ಆ ಹುಡುಗ.

ಓಹೋ ಹಾಗಾ ವಿಷಯ.

ಹಾಗಾಗಿ ನಾವು ಸಡನ್ ಆಗಿ ಬಂದ್ದು ಇವನಿಗೆ ನುಂಗಲಾರದ ತುತ್ತಾಗಿತ್ತು ಎಂಬುದು ನಮ್ಮ ಅರಿವಿಗೆ ಬಂದಿತ್ತು.ಆ ನಂತರ ನಾವು ಕಲ್ಮಕಾರು ಕಡೆಗೆ ಹೆಜ್ಜೆ ಹಾಕಿದೆವು.

ಅಲ್ಲಿ ಕಲ್ಲು ವ್ಯಾಪಾರಕ್ಕೆ ಅಧಿಕಾರಿಗಳದ್ದೇ ಸಹಕಾರ. ಎಲ್ಲಾದರೂ ಹಿರಿಯ ಅಧಿಕಾರಿಗಳು ಆ ಪ್ರದೇಶಕ್ಕೆ ಬರ್ತಾರೆ ಎಂದಾದರೆ ಇಲ್ಲಿನ ಅಧಿಕಾರಿಗಳಿಗೇ ಮೊದಲೇ ಮೆಸೇಜ್ ಬರ್ತದೆ.ಹಾಗಾಗಿ ಅಂದು ಯಾರೂ ಕೂಡಾ ಹರಳು ಕಲ್ಲಿಗೆ ಬರೋದೇ ಇಲ್ಲ. ಒಂದು ವೇಳೆ ಅಧಿಕಾರಿಗಳು ಮಾಹಿತಿ ನೀಡದೆ ಬಂದರು ಎಂದಾದರೆ ಕಲ್ಮಕಾರಿನಲ್ಲಿ ಒಂದು ಪಟಾಕಿ ಬಾಂಬ್ ಸಿಡಿಯುತ್ತೆ. ಅಧಿಕಾರಿಗಳು ಕಾಡು ದಾರಿಯಲ್ಲಿ ನಡೆದೇ ಬರಬೇಕು. ಕಲ್ಮಕಾರಿನಲ್ಲಿ ಒಂದು ಪಟಾಕಿ ಬಾಂಬ್ ಸಿಡಿದ ಕೆಲವೇ ಕ್ಷಣದಲ್ಲಿ ಇನ್ನೊಂದು ಸಿಡಿಯುತ್ತೆ.ಇಷ್ಟು ಹೊತ್ತಿಗೆ ಈ ಸದ್ದು ಕೂಜಿಮಲೆಗೆ ಕೇಳುತ್ತೆ. ಹರಳು ಕಲ್ಲು ತೆಗೆಯೋರೆಲ್ಲಾ ನಾಪತ್ತೆ. ಅಧಿಕಾರಿಗಳದ್ದು ಸರ್ಪಗಾವಲು . .!. ಇದು ಮೊಬೈಲ್ ಇಲ್ಲದ ಕಾಲದ ವ್ಯವಸ್ಥೆ.ಈಗಂತೂ ಮೊಬೈಲ್ ಸಿಗುತ್ತೆ.ಫೋನೇ ಬರುತ್ತೆ ಬಿಡಿ.