01 October 2010

ಸೊಳ್ಳೆ ಬಂತು ಕತೆ . .

ನಾನಾಗ ಹತ್ತನೇ ತರಗತಿ.ಇಲ್ಲಿಂದಲೇ ನನ್ನ ಬರಹ ಶುರುವಾಯಿತು.ಆಗ ಶಾಲಾ ಭಿತ್ತಿ ಪತ್ರದಲ್ಲಿ ಬರೆಯುವವರ ಸಂಖ್ಯೆ ಕಡಿಮೆ ಇತ್ತು.ನಾವೆಲ್ಲಾ ಯಾರಾದರೂ ಬರೆದ್ರೆ ಅವರನ್ನೆಲ್ಲಾ ಏನಾದ್ರೂ ಹೇಳಿ ಗೇಲಿ ಮಾಡುತ್ತಿದ್ದೆವು.ಇದನ್ನೆಲ್ಲಾ ಅಧ್ಯಾಪಕರು ಗಮನಿಸ್ತಿದ್ರು.ಹಾಗಾಗಿ ನನ್ನನ್ನು ಕರೆದು ಅಧ್ಯಾಪಕರು ಹೇಳಿದ್ರು ,ನೀನು ಹೇಗಿದ್ರೂ ಹಾಸ್ಟೆಲ್‌ನಲ್ಲಿ ಇರೋದಲ್ವಾ ?. ಶಾಲೆಯ ಕೆಲಸ ಮುಗಿದ ಮೇಲೆ ರಾತ್ರಿ ಒಂದು ಕತೆ , ಕವಿತೆ ಏನಾದ್ರೂ ಬರೀ ಅಂತ ಹೇಳಿದ್ರು. ಆಯ್ತು ಸಾರ್ ಅಂದೆ. ಒಂದು ದಿನ ಕಳೆಯಿತು ವಿಷಯವೇ ಸಿಕ್ಕಿಲ್ಲ.ಮರುದಿನ ಮೇಷ್ಟ್ರು ಆಯ್ತಾ ಅಂತ ಕೇಳಿದ್ರು. ಇಲ್ಲ ಅಂದೆ. ಮಾತಾಡಿಲ್ಲ. ಅಬ್ಬಾ . . ಅಂತ ರೂಂ ಗೆ ಬಂದು ಕುಳಿತಿದ್ದೆ.ಮರುದಿನವೂ ಹೀಗೇ ಹಾಸ್ಟೆಲ್ ರೂಮಲ್ಲಿ ಕುಳಿತಿದ್ದೆ. ಅಯ್ಯೋ ಸೊಳ್ಳೆಗಳೇ ಸೊಳ್ಳೆಗಳು. ಅದಕ್ಕಾಗಿ ಮಾಸ್ಕಿಟೋ ಕಾಯಿಲ್ ಹಚ್ಚಿದ್ರೂ ಹೋಗಲೇ ಇಲ್ಲ. ಇನ್ನೂ ಒಂದೆರಡು ಹಚ್ಚಿ ಇಟ್ಟು ನಾವೆಲ್ಲಾ ರೂಂನಿಂದ ಹೊರಕ್ಕೆ ಹೋಗಿದ್ದೆವು. ಸುಮಾರು ಹೊತ್ತು ಆದ ಬಳಿಕ ಬಂದಾಗ ನಮ್ಮ ಬೆಂಚ್‌ಗೇ ಕಾಯಿಲ್ ತಾಗಿ ಅದರಿಂದ ಹೊಗೆ ಬರುತ್ತಿತ್ತು.ರೂಂ ತುಂಬೆಲ್ಲಾ ಹೊಗೆ. ಇದೇ ನನ್ನ ಚಿಕ್ಕ ಕತೆಗೆ ವಸ್ತುವಾಯಿತು.

ಅದು ಹೀಗಿತ್ತು. .

“ಸೊಳ್ಳೆ ಬಂತು ಸೊಳ್ಳೆ” ಇದು ಹೆಡ್ಡಿಂಗ್

ಪುಟ್ಟ ಶಾಲೆ ಬಿಟ್ಟು ಮನೆಗೆ ಬಂದ
ಸೊಳ್ಳೆ ಕಾಟ ಹೆಚ್ಚಾಯಿತು ಅಂತ ಹಚ್ಚಿದ ಬೆಂಕಿ
ಸೊಳ್ಳೆ ಕಾಯಿಲ್‌ಗೆ ಅಲ್ಲ ಇಡೀ ಮನೆಗೆ.ಸೊಳ್ಳೆ ಎಲ್ಲಾ ಸತ್ತಿತು ಅಂತ ಖುಷಿ ಪಟ್ಟ.


ಇದನ್ನು ಮೇಷ್ಟ್ರಿಗೆ ಕೊಟ್ಟೆ.ಓದಿದ ಮೇಷ್ಟ್ರು ಸರಿ ಅಂತ ಒಳಗಿಟ್ಟರು. ನಾನು ಅಂದುಕೊಂಡೆ ಇದನ್ನು ಹಾಕಲಾರರು ಅಂತ.ಮರುದಿನ ನೋಡಿದ್ರೆ ಭಿತ್ತಿ ಪತ್ರದಲ್ಲಿ ಅದು ಇದೆ. ಖುಷಿಯಾಯ್ತು. ಅದನ್ನು ಓದಿದ ನನ್ನ ಫ್ರೆಂಡ್ಸ್ ಎಲ್ಲಾ ನಾವೆಲ್ಲಾ ಆವತ್ತು ಗೇಲಿ ಮಾಡುತ್ತಿದ್ದಂತೆಯೇ ನನ್ನನ್ನೂ ಎಂತ ಮಾರಾಯ ಇದು . ? ಅಂತ ಗೇಲಿ ಮಾಡಿದ್ರು. ನನಗಾಯಿತು ನಾಳೆ ಇದಕ್ಕಿಂತ ಚೆನ್ನಾಗಿ ಏನಾದ್ರು ಕತೆ , ಕವಿತೆ ಬರೀಬೇಕು ಅಂತ ಯೋಚನೆ ಮಾಡಿದೆ.