06 October 2010

ದಾರಿ ಸುಗಮವಾಯ್ತು. .

ಲೋಕಲ್ ಪತ್ರಿಕೆಗಳಲ್ಲಿ ವರದಿ ಮಾಡುವುದಕ್ಕೆ , ಬರೆಯುವುದಕ್ಕೆ ಕಲಿತಾಗುತ್ತಿದ್ದಂತೆಯೇ ರಾಜ್ಯಮಟ್ಟದ ದಿನಪತ್ರಿಕೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾಗ ಹೊಸದಿಗಂತಕ್ಕೆ ಕಡಬದಿಂದ ವರದಿಗಾರ ಬೇಕು ಎಂಬ ಸುದ್ದಿ ಸಿಕ್ಕಿದ್ದೇ ತಡ. ಕೂಡಲೇ ಅರ್ಜಿ ಹಾಕಿ ಸಂಪಾದಕರಾದ ಪ್ರಕಾಶ್ ಅವರಲ್ಲಿ ಮಾತನಾಡಿ ಕಡಬದಿಂದ ವರದಿ ಮಾಡುವುದ್ಕಕೆ ಅವಕಾಶ ಸಿಕ್ಕಿತು.

ನಾನು ಆ ನಂತರ ಹೊಸದಿಗಂತ ಪತ್ರಿಕೆಯ ಕಡಬದ ಬಿಡಿಸುದ್ದಿ ವರದಿಗಾರ , ಅಂದರೆ ಪತ್ರಿಕಾ ಭಾಷೆಯಲ್ಲಿ ಹೇಳುವುದಾದರೆ ಸ್ಟ್ರಿಂಜರ್.ಸಂಬಳ ನಾವು ಮಾಡಿದ ವರದಿಯ ಮೇಲೆ.ಅಂದರೆ ಇಲ್ಲಿ ಕಾಲಂ ಸೆಂಟಿ ಮೀಟರ್ ಲೆಕ್ಕ.ಒಂದು ಕಾಲಂ ಸೆಂಟಿಮೀಟರ್‌ಗೆ ಒಂದು ರುಪಾಯಿ ಇತ್ತ.ಮನೆಯಿಂದ ಕಡಬವು 15 ಕಿಲೋ ಮೀಟರ್ ದೂರದಲ್ಲಿದೆ.ಇಡೀ ಕಡಬ ಪ್ರದೇಶವು ಮತ್ತೂ ಒಂದು ೩೦ ಕಿಲೋ ಮೀಟರ್ ಆಗಬಹುದು. ಖರ್ಚು ಲೆಕ್ಕಹಾಕಿದರೆ ಏನೂ ಸಿಗಲಾರದು ಕೈಯಿಂದಲೇ ಖರ್ಚಾದೀತು.ಆದರೂ ಅವಕಾಶ ಬಿಡಲಿಲ್ಲ. ಒಂದು ಸ್ಕೂಟರ್ ಇತ್ತು.ಅದರಲ್ಲಿ ಕಡಬದ ಕಡೆಗೆ ಹೋಗಲಾರಂಭಿಸಿತು. ಹೊಸದಿಗಂತಕ್ಕೆ 2005 ರ ಮಾರ್ಚ್‌ನಲ್ಲಿ ಸೇರಿಯಾಗಿತ್ತು.

ಕಡಬಕ್ಕೆ ಮೊದಲು ಹೋದಾಗ ಅಲ್ಲಿನ ಸ್ಟೇಷನ್ ಎದುರುಗಡೆ ಒಂದು ಪೇಪರ್ ಸ್ಟಾಲ್ ಇತ್ತು.ಅಲ್ಲಿಗೆ ಹೋಗಿ ನನ್ನ ಪರಿಚಯ ಮಾಡಿಕೊಂಡ ಬಳಿಕ ಅಲ್ಲಿನ ಇತರ ಪತ್ರಿಕೆಯ ವರದಿಗಾರರನ್ನು ಸಂಪರ್ಕಿಸಿದೆ. ಉದಯವಾಣಿಯ ನಾಗರಾಜ್ ಕಡಬ ಜೊತೆಯಾದರು.ಅವರ ಜೊತೆಗೆ ಅಲ್ಲಿನ ಸುದ್ದಿ ವರದಿಗಾರ ಹರೀಶ್ , ವಿಜಯ್ ಕೂಡಾ ಪರಿಚಯವಾದರು.ಆ ಬಳಿಕ ಅವರೊಂದಿಗೆ ವಿವಿದ ಚಿಕ್ಕ ಪುಟ್ಟ ವರದಿಗೆ ತೆರಳಲು ಆರಂಭವಾಯಿತು. ಹಾಗೇ ಮೊದಲ ಬೈಲೈನ್ ಸ್ಟೋರಿಯೊಂದು 2005 ಏಪ್ರಿಲ್ 19 ರಂದು ಪ್ರಕಟವಾಯಿತು. “ ಮೋಕ್ಷ ಕಾಣದ ನೀರಿನ ಯೋಜನೆ” ಎಂಬುದು ಆ ಸ್ಟೋರಿಯ ಹೆಡ್ಡಿಂಗ್. ಕಡಬದ ಕೊಂಬಾರು ಕಾಲನಿಯ ಕುಡಿಯುವ ನೀರಿನ ಯೋಜನೆಯ ವರದಿ ಅದಾಗಿತ್ತು. ಆ ಬಳಿಕ ಇಲ್ಲೊಬ್ಬ ಹೊಸದಿಗಂತದ ವರದಿಗಾರನಿದ್ದಾನೆ ಎಂಬು ಊರಿಗೆ ಗೊತ್ತಾಯಿತು. ಕೆಲ ಫೋನುಗಳು ಆ ನಂತರ ಬರಲಾರಂಭಿಸಿತು.ಸುದ್ದಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿತು.ಹೀಗೇ ಒಂದು ತಿಂಗಳು ಕಳೆದಾಗ ವಿಜಯ ಕರ್ನಾಟಕದ ಇನ್ನೊಂದು ಪತ್ರಿಕೆ ಉಷಾಕಿರಣವು ಬರುತ್ತಿದೆ ಎಂಬ ಸುದ್ದಿ ಸಿಕ್ಕಿತು.ತಕ್ಷಣವೇ ಅತ್ತ ಕಡೆ ಕಣ್ಣು ಹಾಯಿಸಿದೆ.