10 October 2010

ಅನುಭವಕ್ಕೆ ದಾರಿಯಾಯ್ತು. .

ಕಡಬದಿಂದ ಹೊಸದಿಗಂತ ಪತ್ರಿಕೆ ಸುಮಾರು ಎರಡು ತಿಂಗಳುಗಳ ಕಾಲ ಬಿಡಿಸುದ್ದಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಉಷಾಕಿರಣ ಪತ್ರಿಕೆ ಆರಂಭವಾಗುತ್ತದೆ ಅನ್ನೋ ಸುದ್ದಿ ತಿಳಿದಾಕ್ಷಣ ಅತ್ತ ಕಡೆ ಹೆಜ್ಜೆ ಹಾಕಿ ಮಂಗಳೂರಿನ ಕಚೇರಿಗೆ ಹೋಗಿ ಮಾತನಾಡಿ ಆಗಮಿಸಿದ್ದಾಯಿತು. ಈ ನಡುವೆ ಇಲ್ಲಿ ವರದಿ ಮಾಡೋದು ನಿಂತಿರಲಿಲ್ಲ. ಅದೇ ಒಂದು ಸ್ಕೂಟರ್.ಅದರಲ್ಲಿ ಕಡಬಕ್ಕೆ 15 ಕಿಲೋ ಮೀಟರ್ ಹೋಗಬೇಕು. ಹಾಗೂ ಹೀಗೂ ಹೋಗುತ್ತಿದ್ದೆ. ವರದಿಯೂ ಬರುತ್ತಿತ್ತು.

ಅಷ್ಟರಲ್ಲೇ ಉಷಾಕಿರಣದಿಂದ ಬುಲಾವ್ ಬಂತು.ಸುಬ್ರಹ್ಮಣ್ಯದಿಂದ ಬಿಡಿಸುದ್ದಿ ವರದಿಗಾರನಾಗಿ ಆಯ್ಕೆಯೂ ಆಯಿತು.ಆದರೆ ಇದರಲ್ಲಿ ಮಾತ್ರಾ ಹೊಸದಿಗಂತದಿಂದ ಒಂಚೂರು ಹೆಚ್ಚು ಲೈನೇಜ್ ಇತು. ಆ ದಿನಗಳಲ್ಲಿ ಬಹುಷ: ಉಳಿದೆಲ್ಲಾ ಪತ್ರಿಕೆಗಳಿಗಿಂತ ಹೆಚ್ಚಿನ ಲೈನೇಜ್ ಇದ್ದುದು ಇದರಲ್ಲಿ ಮತ್ತು ವಿ.ಕ ದಲ್ಲಿ. ಅಂತೂ 1 ಮಾಚ್ 2005 ರಿಂದ ಉಷಾಕಿರಣ ಪತ್ರಿಕೆಗೆ ಸುಬ್ರಹಣ್ಯದಿಂದ ವರದಿ ಮಾಡೋದಿಕ್ಕೆ ಆರಂಭವಾಯ್ತು.ಇಲ್ಲಿ ನಮ್ಮ ವ್ಯಾಪ್ತಿ , ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿ ಎಲ್ಲಾ. ಆಗ ನಾನು ಸುಬ್ರಹಣ್ಯಕ್ಕೆ ಹೋಗುವಾಗ ನನಗೆ ಪರಿಚಯ ಇದ್ದದ್ದು ವಿಜಯಕರ್ನಾಟಕದ ಮಂಜುನಾಥ ರಾವ್ , ಉದಯವಾಣಿಯ ವಿಠಲ ರಾವ್ ಮಾತ್ರಾ.ಇನ್ನು ಪ್ರಜಾವಾಣಿಯ ಗೋವಿಂದ ಎನ್.ಎಸ್ ಹಾಗೂ ಕನ್ನಡ ಪ್ರಭದ ಮಂಜುನಾಥ ಭಟ್ ಮತ್ತು ಆಗ ಹೊಸದಿಗಂತಕ್ಕೆ ಆಗಾಗ ವರದಿ ಮಾಡುತ್ತಿದ್ದ ಮೋಹನ್ ನಂಬಿಯಾರ್ ಇವರನ್ನೆಲ್ಲಾ ಅಷ್ಟೊಂದು ಪರಿಚಯ ಇದ್ದಿರಲಿಲ್ಲ. ಯಾಕೆಂದ್ರೆ ವಿಠಲ್ ರಾವ್ ನನಗೆ ಮೇಷ್ಟ್ರೂ ಆಗಿದ್ದರು. ಮಂಜುನಾಥ ರಾವ್ ಅವರಿಗೆ ನಮ್ಮ ಭಾಗದ ಸುದ್ದಿಗಳನ್ನೂ ನೀಡುತ್ತಿದ್ದ ಕಾರಣ ಅವರ ಪರಿಚಯ ಇದ್ದಿತ್ತು.ಉಳಿದವರ ಬಗ್ಗೆ ಗೊತ್ತಿತ್ತು , ಆದರೆ ಹೆಚ್ಚು ಪರಿಚಯ ಇದ್ದಿರಲಿಲ್ಲ.

ಮೊದಲ ಒಂದೆರಡು ತಿಂಗಳು ಕಾಂಟಾಕ್ಟ್ ಬೆಳೆಸಿಕೊಳ್ಳಲು ಮತ್ತು ಸುದ್ದಿಯ ಹಿಡಿತಕ್ಕೆ ಸಮಯ ತಗುಲಿತು. ನಂತರ ದಿನಕಳೆದಂತೆ ಅನುಭವಗಳು ಹೆಚ್ಚಾಯಿತು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರೋ ಅತಿಥಿಗಳ್ನು ಮಾತನಾಡಿಸಿ ಒಂದು ಇಂಟರ್ ವ್ಯೂ ಬರೆಯುವುದು ಕೂಡಾ ಹೆಚ್ಚಾಯಿತು. ಮೊದಲಿಗೆ ಸಿಕ್ಕಿದ್ದು ಕಿರುತೆರೆ ಕಲಾವಿದೆ , ಚಿತ್ರನಟಿ ಪವಿತ್ರಾ ಲೋಕೇಶ್. ಆವತ್ತು ಶುಕ್ರವಾರ.ದೇವಸ್ಥಾನದಲ್ಲಿ ಪೂಜೆ ನಡೆಸಿದ ಬಳಿಕ ಮಾತನಾಡಿದ್ದರು.ಅದಾಗಿ ಕೆಲ ದಿನಗಳ ನಂತರ ಅಂದರೆ 12 ಜುಲೈ 2005 ರಂದು ಕುಕ್ಕೆ ಸುಬ್ರಹಣ್ಯಕ್ಕೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನಡೆಸಲು ಬಂದಿದ್ದ ವೇಳೆ "ಉಷಾಕಿರಣ"ದ ಪ್ರತಿನಿಧಿಯಾಗಿ ನಾನು ಮಾತನಾಡಿಸಿದ್ದು ಇನ್ನೂ ನೆನಪಿನಲ್ಲಿದೆ. ಹಾಗೆಯೇ ವಿವಿದ ಅತಿಥಿಗಳು ಬಂದಾಗ ನನ್ನ ಮಾತುಕತೆ ಮುಂದಯವರೆದೇ ಇತ್ತು. ಈಗ ಹೆಚ್ಚು ಜೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಿತ್ತು. ಆಗಲೂ ಅದೇ ಸ್ಕೂಟರ್‌ನಲ್ಲಿ ಸುಬ್ರಹ್ಮಣ್ಯಕ್ಕೆ 15 ಕಿಲೋ ಮೀಟರ್ ದೂರ ಮನೆಯಿಂದ ಎರಡು ದಿನಗಳಿಗೊಮ್ಮೆ ಅತಿಥಿಗಳು ಯಾರಾದರೂ ಬಂದರೆ ಅತ್ತ ಕಡೆ ಹೋಗುವುವಿದಿತ್ತು. ಯಾರದರೂ ಕುಕ್ಕೆಗೆ ಬರ್ತಾರೆ ಅಂದ್ರೆ ಮಾಹಿತಿ ಕೊಡೋರು ಸುಬ್ರಹ್ಮಣ್ಯದ ಜಗ್ಗಣ್ಣ. ಸುಬ್ರಹ್ಮಣ್ಯದಲ್ಲಿ ಅಂಗಡಿ ಇಟ್ಟುಕೊಂಡಿರೋ ಜಗದೀಶ್ ಶೆಟ್ಟಿ ಎಲ್ಲಾ ಮಾಹಿತಿಗಳನ್ನು ಇಂದಿಗೂ ಕೊಡುತ್ತಾರೆ. ಒಂದು ಮಿಸ್ ಕಾಲ್. ಕೆಲವೊಮ್ಮೆ ಫೋನೇ ಮಾಡ್ತಾರೆ.ಅವರಿಗೆ ಆ ವಿಷಯ ಪೇಪರಲ್ಲಿ ಬರೋದಿಕ್ಕಿಂತಲೂ ಮಿತ್ರತ್ವ ಹೆಚ್ಚು ಇಷ್ಟ. ಹಾಗಾಗಿ ಜಗ್ಗಣ್ಣ ಅಂದ್ರೆ ನಮಗೆಲ್ಲಾ ಹೆಚ್ಚು ಇಷ್ಠ. ಅವರು ಹೇಳಿದ ಯಾವುದೇ ಸುದ್ದಿಯನ್ನು ಮಾಡದೇ ಇರೋದೇ ಇಲ್ಲ.ಇನ್ನು ಅವರ ವಯಸ್ಸು ನೋಡಿದರೆ ನಮಗಿಂತ ಎಷ್ಟೋ ದೊಡ್ಡ.ಆದರೆ ಅವರು ನಮಗೆ ಗೌರವ ಕೋಡೋದು ನೋಡಿದ್ರೆ ನಮಗೆ ನಾಚಿಕೆಯಾಗುತ್ತೆ. ಅಂತಹ ಜಗ್ಗಣ್ಣ ಅವರು.ಅಹಂಕಾರ ಅನ್ನೋದು ಅವರಲ್ಲಿ ಲವಲೇಶಚೂ ಕಾಣದು.ಅಂತಹ ಜಗ್ಗಣ್ಣ ಮನಗೊಂದು ಆಸ್ಥಿಯೂ ಆಗಿದ್ದರು.ಸುದ್ದಿ ಮೂಲವೂ ಆಗಿದ್ದರು.ಹಾಗಾಗಿ ನನ್ನ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇದೆ.

ಇದರ ನಡುವೆ ಸುಬ್ರಹ್ಮಣ್ಯದ ಇತರ ವರದಿಗಾರರಾದ ಗೋವಿಂದ , ಮಂಜುನಾಥ ಭಟ್ ಹೆಚ್ಚು ಹತ್ತಿರವಾದರು. ಅವರಿಬ್ಬರೂ ಕೂಡಾ ಹೆಚ್ಚಿನ ಪ್ರೋತ್ಸಾಹವನ್ನೂ ನೀಡುತ್ತಿದ್ದರು.