12 October 2010

ಗೆಳೆಯನೊಬ್ಬ ಸಿಕ್ಕಿದ . . ಇನೊಬ್ಬನೂ ಜೊತೆಯಾದ . .

ಅಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರದಾನಿ ದೇವೇ ಗೌಡ ಬಂದಿದ್ದರು. ಬೆಳಗ್ಗೆಯೇ ಕುಕ್ಕೆಗೆ ಬಂದ ದೇವೇ ಗೌಡ ಆ ನಂತರ ಅವರು ಇನ್ನೆಲ್ಲಿಗೋ ತೆರಳುವವರಿದ್ದರು. ಸುಬ್ರಹ್ಮಣ್ಯದ ವರದಿಗಾರರಾಗಿ ನಾವೆಲ್ಲಾ ಬೆಳಗ್ಗೆಯೇ ಅಲ್ಲಿದ್ದೆವು. ದೇವಸ್ಥಾನಕ್ಕೆ ಹೋಗಿ ಬಂದ ನಂತರ ಅವರು ವಿ‌ಐಪಿ ಕೊಠಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವುದು ಸಾಮಾನ್ಯ ರೂಢಿ. ಅಂದೂ ಹಾಗೆಯೇ ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾರೆ ಅನ್ನುವಷ್ಠರಲ್ಲೇ ಅಲ್ಲಿಗೆ ಓಡೋಡಿ ಬಂದವನು ಈಟಿವಿಯ ವಿನಾಯಕ. ಆಗ ಪರಿಚಯ ಇಲ್ಲ.ಆತನೂ ಹೊಸಬ. ನಾವು ಇನ್ನೇನು ದೇವೇ ಗೌಡರ ಜೊತೆ ಮಾತನಾಡಬೇಕು ಎನ್ನುವಷ್ಠರಲ್ಲಿ ವಿನಾಯಕ ಹೇಳಿದ , ಸರ್ ,ಲೋಗೋ ಹಿಡಿಬೇಕಿತ್ತಲ್ಲಾ , ಸರಿ , ನನಗೆ ಏನು ಮಾಡೋದು ಅಂದೆ.ನಿಮಗೆ ಮತ್ತೆ ರೆಕಾರ್ಡ್ ಆದದ್ದು ಕೇಳಿಸುತ್ತೇನೆ ಅಂದ. ಹಾಗೆಯೇ ಲೋಗೋ ಹಿಡಿದಾಯಿತು. ನನ್ನ ಪರಿಚಯವೂ ಅವನಿಗಾಯಿತು. ಆ ನಂತರ ಆತ ನನಗೆ ಆಗಾಗ ಫೋನು ಮಾಡುತ್ತಲಿದ್ದ. ನಾನು ಮಾಹಿತಿ , ಸ್ಟೋರಿಗನ್ನು ನೀಡುತ್ತಿದ್ದೆ. ದಿನ ಕಳೆದಂತೆ ಒಳ್ಳೆಯ ಫ್ರೆಂಡ್‌ಗಳಾದೆವು. ಇಂದಿಗೂ ಕೂಡಾ ಅದೇ ಬಾಂಧವ್ಯ ಇದೆ. ಮಾತ್ರವಲ್ಲ ಹಿತ ಬಯಸುವ ಒಳ್ಳೆಯ ಸ್ನೇಹಿತರಾಗಿಯೂ ಇದ್ದೇವೆ.ಆತ ಇಂದು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರನಾಗಿ ಮಿಂಚುತ್ತಿದ್ದಾನೆ. ಮೊದಲಿಗೆ ಸುಬ್ರಹ್ಮಣ್ಯದಿಂದ ಆತ ಪೊಲಿಟಿಕಲ್ ವರದಿ ಆರಂಭಿಸಿದ್ದು ಅನ್ನೋದು ಇನ್ನೊಂದು ಸ್ಪೆಷಾಲಿಟಿ.

ವಿನಾಯಕ ಗಂಗೊಳ್ಳಿಯವನಾಗಿದ್ದ. ಪುತ್ತೂರಲ್ಲಿ ಕೆಲಸದ ನಿಮಿತ್ತ ವಾಸ್ತವ್ಯ ಹೂಡಿದ್ದ. ಹೀಗೆ ಸುಳ್ಯ , ಸುಬ್ರಹ್ಮಣ್ಯದ ಕಡೆಗೆ ಬರುತ್ತಿದ್ದ ವಿನಾಯಕನ ಜೊತೆಗೆ ಪುತ್ತೂರು ಕೇಬಲ್ ನೆಟ್‌ವರ್ಕ್ ಚಾನೆಲ್ ಮತ್ತು ಕರಾವಳಿ ವಾರ್ತೆಯ ಪ್ರವೀಣ್ ಕೂಡಾ ಜೊತೆಯಾಗಿ ಆ ನಂತರ ಬರುತ್ತಿದ್ದರು. ನಂಗೂ ವಿನಾಯಕನ ಮೂಲಕ. ಪ್ರವೀಣ ಇನ್ನೊಬ್ಬ ಒಳ್ಳೆ ಫ್ರೆಂಡ್ ಆದ್ರು. ಅವರಿಬ್ಬರಿಗೂ ಅದೆಷ್ಟೋ ಸ್ಟೋರಿಗಳನ್ನು ನೀಡುತ್ತಿದೆ. ಅವರು ಬೆಳಗ್ಗೆ 7 - 8 ಗಂಟೆಗೆ ಪುತ್ತೂರಿನಿಂದ ಮನೆಗೆ ಬರುತ್ತಿದ್ದರು. ನನಗೆ ಮನೆಯಲ್ಲಿ ಬೆಳಗ್ಗೆ ಹಟ್ಟಿಯ ಕೆಲಸ ಇದ್ದಿತ್ತು. ಆ ಬಳಿಕ ಹಾಲನ್ನು ಸಮೀಪದ ವಾಹನಕ್ಕೆ ನೀಡಿ ಬರಬೇಕಾಗಿತ್ತು. ಆ ಬಳಿಕ ಜೊತಯಾಗೇ ಮನೆಯಲ್ಲಿ ಕಾಫಿ ಕುಡಿದು ಮುಂದಿನ ಪ್ರಯಾಣ ಮಾಡುತ್ತಿದ್ದೆವು.ಹಾಗೇ ಇಂತಹದ್ದೇ ಅದಷ್ಟೋ ದಿನ ನಮ್ಮ ಪಾಲಿಗೆ ಬಂದಿತ್ತು. ಅಂತಹದ್ದರಲ್ಲಿ ಒಂದು ದಿನ ಸನನಗೂ ವಿನಾಯಕನಿಗೂ ಒಂಚೂರು ಹಾಗೂ . . ಹೀಗೂ ಆಗಿತ್ತು. ಅಂದು ವಿನಾಯಕ ಮನೆಗೆ ಬಂದು ಗುತ್ತಿಗಾರಿಗೆ ಒಂದು ಸ್ಟೋರಿಗೆ ಹೋಗಿ ಸುಬ್ರಹ್ಮಣ್ಯಕ್ಕೆ ಹೋಗೋದು ಅಂತ ಮಾತನಾಡಿದ್ದೆವು.ಆತ ನೇರವಾಗಿ ಗುತ್ತಿಗಾರಿಗೆ ಹೋಗಿದ್ದ.ನಾನು ಮನೆಯಲ್ಲಿ ಕಾದು ಕುಳಿತು ಫೊನು ಮಾಡಿದಾಗ ನಾನು ಗುತ್ತಿಗಾರಿನಲ್ಲಿ ಇದ್ದೇನೋ ಅಂದ. ನನಗೆ ಬೇಸರವಾಗಿತ್ತು.ಅವನಿಗಾಗಿ ಕಾದು ಕುಳಿತು ಆತ ನೇರವಾಗಿ ಹೋದನಲ್ಲ ಎಂಬ ಸಿಟ್ಟು , ಬೇಸರ ಎರಡೂ ಆಗಿತ್ತು. ಸರಿ ಅಂತ ಫೋನು ಕಟ್ ಮಾಡಿದೆ. ಮತ್ತೆ ಸುಬ್ರಹ್ಮಣ್ಯಕ್ಕೆ ಬಾ ಅಂದಿದ್ದ. ನಾನು ಹೋಗಲೇ ಇಲ್ಲ. ಆತ ಫೋನು ಮಾಡುವಾಗ ನಾನು ಕಟ್ ಮಾಡಿದೆ. ಪಾಪ , ಸಂಜೆ ಆತ ಮನೆಗೇ ಬಂದ. ನಾನು ಬೇರೆಲ್ಲಿಗೋ ಹೊರಟಿದ್ದೆ. ಆಯ್ತು ಮಾರಾಯ ಅಂತ ಹೇಳಿ ನಾನು ಅವನನ್ನು ಮಾತನಾಡಿಸದೇ ನೇರವಾಗಿ ಹೋದೆ. ಆ ನಂತರ ನನಗೂ ಪಶ್ಚಾತ್ತಾಪವಾಯಿತು ಅದು ಬೇರೆ. ನನಗೆ ಬೇಸರವಾಗಿದೆ ಅಂತ ಆತನಿಗೂ ಅನಿಸಿತು. ಸ್ಸಾರಿ ಮಾರಾಯ ಅಂತ ಮತ್ತೆ ಮತ್ತೆ ಫೋನು ಮಾಡಿ ಹೇಳಿದ. ಪಾಪ ಏನಾದ್ರೂ ಫ್ರೆಂಡ್ ಅಲ್ವಾ. ಮರುದಿನದಿಂದ ಒಂದೇ ಹಾದಿ. ಅದೊಂದು ಘಟನೆ ಬಿಟ್ಟರೆ ವಿನಾಯಕ ಮತ್ತು ನನ್ನ ಮಧ್ಯೆ ಇಂದಿಗೂ ಒಂದೇ ಹಾದಿ ನಮ್ಮದು. ಪ್ರವೀಣ ಇನ್ನೊಬ್ಬ ಗೆಳೆಯ.ಇಂದಿಗೂ ಪುತ್ತೂರಿನ ಪ್ರವೀಣ್ ಮನೆಗೆ ಹೋಗ್ತೇನೆ. ಹೀಗೇ ವಿನಾಯಕ ಜೊತೆ ಹೋಗುವಾಗ ಅದೆಷ್ಟೋ ಇಂಟೆರೆಸ್ಟಿಂಗ್ ಸಂಗತಿಗಳಾಗಿವೆ.ಒಳ್ಳೋಳ್ಳೆ ಸ್ಟೋರಿಗಳನ್ನೂ ಮಾಡಿದ್ದೇವೆ.