04 October 2010

ದಾರಿ ಸುಗಮವಾಯ್ತು . .

ಪುತ್ತೂರುನಿಂದ ಕಾಲೇಜು ಮುಗಿಸಿ 2002 -03 ರಲ್ಲಿ ಮನೆ ಸೇರಿದ ಬಳಿಕ ಹಾಗೇ ದಿನವೂ ಪತ್ರಿಕೆಗಳ ಮೇಲೆ ಕಣ್ಣಾಡಿಸುವುದು ಮತ್ತು ಅದಕ್ಕೆ ಪ್ರತಿಕ್ರಿಯೆ ಬರೆಯುವುದು ರೂಢಿ. ಹಾಗೇ ಪತ್ರಿಕೆ ನೋಡುತ್ತಿದ್ದಾಗ ಸುಳ್ಯದ ಪಯಸ್ವಿನಿ ಪತ್ರಕೆಯಲ್ಲಿ ವರದಿಗಾರಿಕೆ ತರಬೇತಿ ಶಿಬಿರ ನಡೆಯುತ್ತದೆ ಎಂಬ ಜಾಹೀರಾತು ಗಮನಿಸಿ ಆಸಕ್ತಿಯಿಂದ ಕೇಳಿದಾಗ ಬನ್ನಿ ಎಂಬ ಮಾಹಿತಿ ಸಿಕ್ಕಿತು.ಅಲ್ಲಿ ಒಂದಿಷ್ಟು ಗೆಳೆಯರ ಪರಿಚಯವಾಯ್ತು. ಒಳ್ಳೆಯ ತರಬೇತನ್ನು ಪಯಸ್ವಿನಿ ಪತ್ರಿಕೆ ನೀಡಿತು. ಒಂದು ವಾರಗಳ ಕಾಲ ಇಲ್ಲಿ ತರಬೇತಿಯ ಬಳಿಕ ಹಿಂದಿರುಗುವಾಗ ಪಯಸ್ವಿನಿ ಪತ್ರಿಕೆಗೆ ಗೌರವ ವರದಿಗಾರನಾಗಿ ಕೆಲಸ ಮಾಡುವಂತೆ ಪತ್ರಿಕೆಯ ಸಂಪಾದಕ ಅಬ್ದುಲ್ ಸತ್ತಾರ್ ಗೋರಡ್ಕ ಹಾಗೂ ಮುಖ್ಯವರದಿಗಾರ ದುರ್ಗಾಕುಮಾರ್ ನಾಯರ್ಕೆರೆ ಹೇಳಿದ್ದರು. ನನಗೂ ಹೇಗೂ ಅದು ಆಸಕ್ತಿಯ ವಿಷಯವೂ ಆಗಿತ್ತು.ಅದರಂತೆ ಪಯಸ್ವಿನಿ ಪತ್ರಿಕೆಗೆ ವರದಿ ಮಾಡುವುದಕ್ಕೆ ಶುರುವಾಯಿತು.ವಿವಿದ ರೀತಿಯ ವರದಿಗಳು ಕಳುಹಿಸಿದೆ. ಅದಕ್ಕೆ ಒಪ್ಪವಾದ ಓರಣವನ್ನು ದುರ್ಗಾಕುಮಾರ್ ನೀಡಿದರು. ನಾನು ಬರೆದ ಮತ್ತೆ ಅದು ಪ್ರಿಂಟಾದ್ದು ಹೇಗೆ ಎಂಬುದನ್ನು ಗಮನಿಸುತ್ತಾ ಬಂದೆ.ಹಾಗೆ ಬರೆಯುತ್ತಾ ಬರೆಯುತ್ತಾ ಕಾಂಟ್ಯಾಕ್ಟ್ಸ್ ಹೆಚ್ಚಿತು. ಈ ನಡುವೆ ಸುಳ್ಯದ ಚೇತನಾ ಪತ್ರಿಕೆ ಮತ್ತು ಸುದ್ದಿಬಿಡುಗಡೆ ಕೂಡಾ ಹತ್ತಿರವಾಯಿತು.ಅಲ್ಲೂ ಅವಕಾಶಗಳು ಸಿಕ್ಕಿತು.ಇಂದಿಗೂ ಸುಳ್ಯದ ಈ ಎಲ್ಲಾ ಪತ್ರಿಕೆಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಇಂದಿಗೂ ಈ ಎಲ್ಲಾ ಪತ್ರಿಕೆಗಳಿಗೆ ನನ್ನಿಂದಾಗ ಸಹಕಾರ ನೀಡುವುದಕ್ಕೆ ಸಿದ್ದನಿದ್ದೇನೆ.ಯಾಕೆಂದರೆ ನನ್ನನ್ನು ಬೆಳೆಸಿದ್ದು ಸುಳ್ಯದ ಈ ಮೂರು ಪತ್ರಿಕೆಗಳು. ಪಯಸ್ವಿನಿಯ ದುರ್ಗಾಕುಮಾರ್ , ಸುದ್ದಿಯ ಹರೀಶ್ ಬಂಟ್ವಾಳ್ , ಪಯಸ್ವಿನಿಯ ದಿವಂಗತ ಅಬ್ದುಲ್ ಸತ್ತಾರ್ , ಚೇತನಾ ಪತ್ರಿಕೆಯ ಮೇನೇಜ್‌ಮೆಂಟ್‌ನಲ್ಲಿದ್ದ ನ.ಸೀತಾರಾಮ , ಲೋಕೇಶ್ ಹೀಗೆ ಎಲ್ಲರೂ ಬೆಂಬಲಿಸಿದ್ದರು. ಇವರೆಲ್ಲರ ಸಹಕಾರದಿಂದ ಸುದ್ದಿ ಬರೆಯುವುದು ಆರಂಭವಾಯಿತು.ಹಾಗೆಯೇ ಲೇಖನಗಳು , ವಿಶೇಷ ವರದಿಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುವುದಕ್ಕೆ 2003 - 04 ರಿಂದ ಆರಂಭವಾಯಿತು.ಅಂದಿನಿಂದ ಪತ್ರಿಕಾ ನಂಟು ಬೆಸೆಯಿತು.ದಿನಕಳೆದಂತೆ ರಾಜ್ಯಮಟ್ಟದ ಪತ್ರಿಕೆಗಳಿಗೂ ಸ್ಥಳೀಯ ವರದಿ ನೀಡುವುದಕ್ಕೆ ಶುರುವಾಯಿತು. ಒಂದೆರಡು ಲೇಖನಗಳು ತರಂಗ , ಸುಧಾದಲ್ಲೂ ಪ್ರಕಟವಾಯಿತು.

ಅಷ್ಟು ಹೊತ್ತಿಗೆ ಹೊಸದಿಗಂತ ಪತ್ರಿಕೆಗೆ ಕಡಬಕ್ಕೆ ಬಿಡಿಸುದ್ದಿ ವರದಿಗಾರ ಬೇಕೆಂಬ ಮಾಹಿತಿ ಸಿಕ್ಕಿತು.ತಕ್ಷಣವೇ ಅತ್ತ ನೋಟ ಹರಿಸಲಾಯಿತು.