02 October 2010

ಹಕ್ಕಿ ಹಾರಿತು . . .

ಎಲ್ಲರನ್ನೂ ತಮಾಷೆ ಮಾಡುತ್ತಿದ್ದ ಹಾಗೇ ಭಿತ್ತಿ ಪತ್ರದಲ್ಲಿ ನನ್ನ ಆ ಪುಟ್ಟ ಕತೆ ಬಂದದ್ದೇ ತಡ.ತಮಾಷೆ ಶುರುವಾಯಿತು.ನನ್ನೊಳಗೂ ಇನ್ನೊಂದು ಹೊಸದು ಬರೆಯಬೇಕು ಅಂತ ಅನ್ನಿಸಿತು.ವಿಷಯಕ್ಕಾಗಿ ಹುಡಕಾಡಿದೆ.ಬರೆದ ಬರಹವನ್ನು ಪ್ರಕಟಿಸುವುದಕ್ಕೆ ಶಾಲಾ ಭಿತ್ತಿ ಪತ್ರವೂ ಇತ್ತು.ಮೇಷ್ಟ್ರುಗಳೂ ಬರಿ ಮಾರಾಯ ಅಂತ ಹೇಳ್ತಾನೂ ಇದ್ರು.ಹಾಗಾಗಿ ಇನ್ನೊಂದು ಹೊಸತಿಗಾಗಿ ಕಾಯುತ್ತಾ ಇದ್ದೆ. ಆಗ ಹೊಳೆದದ್ದು ಒಂದು ಹಕ್ಕಿಯ ಕತೆ . ಅದನ್ನು ಕವಿತೆಯ ರೂಪದಲ್ಲಿ ಹೀಗೆ ಬರೆದೆ . .

ಹಕ್ಕಿ ಹಾರಿತು . .

ನಮ್ಮ ಮನೆಯ ತೋಟದಲ್ಲಿ ಹಕ್ಕಿಯೊಂದು ಗೂಡು ಕಟ್ಟಿತು
ಕಾಡಿನಿಂದ ಕಡ್ಡಿ , ಹತ್ತಿ ತಂದು ಚಂದ ಮಾಡಿತು .
ಎರಡು ದಿನ ಬಿಟ್ಟು ನೋಡಿದಾಗ ಮೊಟ್ಟೆ ಎರಡು ಇದ್ದಿತು
ದಿನ ಕಳೆದಾಗ ಮೊಟ್ಟೆಯೊಡೆದು ಹಕ್ಕಿಯಾಯಿತು
ಮರಿಹಕ್ಕಿ ದೊಡ್ಡದಾಗಿ ತಾಯಿ ಹಕ್ಕಿ ಜೊತೆ ಹಾರಲು ಕಲಿತಿತು
ಒಂದು ದಿನ ಎದ್ದು ಬಂದು ಬುರ್ ಎಂದು ಹಾರಿ ಹೋಯಿತು
ನಾನು ಹೋಗಿ ನೋಡುವಾಗ ಗೂಡಿನೊಳಗೆ ಏನು ಇಲ್ಲವಾಯಿತು.



ಇದಿಷ್ಟು ಅಂದಿನ ಪದ್ಯ. ಎರಡು ದಿನದ ನಂತರ ಅದೂ ಶಾಲಾ ಭಿತ್ತಿ ಪತ್ರದಲ್ಲಿ ಪ್ರಕಟಗೊಂಡಿತು. ತಮಾಷೆ ಹಾಗೇ ಮುಂದುವರಿದಿತ್ತು.ಆದ್ರೆ ಮತ್ತೆ ಬಾಳಿಲ ಶಾಲೆಯ ಭಿತ್ತಿ ಪತ್ರದಲ್ಲಿ ಬರೆಯುವುದಕ್ಕೆ ನನಗೆ ಅವಕಾಶ ಸಿಕ್ಕಿಲ್ಲ.ಏಕೆಂದ್ರೆ ಆಗ ಹತ್ತನೇ ತರಗತಿ ಮುಗಿಯುವ ಹಂತಕ್ಕೆ ಬಂದಿತ್ತು.ಹಾಗಾಗಿ ಶಾಲೆ ನನಗೆ ಪ್ರೋತ್ಸಾಹ ಕೊಟ್ಟಿದ್ದರೂ ಹೆಚ್ಚು ತೊಡಗಿಸಿಕೊಳ್ಳುವುದಕ್ಕೆ ಆಗಿಲ್ಲ.ಆದರೆ ಈ ಜಾಗೃತಿ ನನ್ನಲ್ಲಿ ಮೂಡಿಸಿದ್ದು ಶಾಲೆಯೇ.ಆದರೆ ಮುಂದೆ ಪಿಯುಸಿಯಲ್ಲಿ ಅದಕ್ಕೆ ಹೆಚ್ಚು ಅವಕಾಶ ಇದ್ದಿರಲಿಲ್ಲ.ಹಾಗಾಗಿ ಎರಡು ವರ್ಷ ಯಾವುದೇ ಬರಹವಿಲ್ಲ.ಮುಂದೆ ಪಿಯುಸಿ ಬಿಟ್ಟು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಹೋದಾಗ ಮತ್ತೆ ಜಾಗೃತವಾಯಿತು ಈ ಬರಹ ಪ್ರಪಂಚ.