03 October 2010

ವ್ಯತ್ಯಾಸ . .

ಪುತ್ತೂರು ಪುರ ಪ್ರವೇಶದ ಬಳಿಕ ಹಾಗೇ ಮೌನ. ಒಂದೆರಡು ತಿಂಗಳು ಬಳಿಕ ಮತ್ತೆ ಲೇಖನಿ ಕೈಗೆ ಬಂತು.ಆಗ "ಜನ ಈ ದಿನ " ಪತ್ರಿಕೆ ಪುತ್ತೂರಿನಿಂದ ಪ್ರಸಾರವಾಗುತ್ತಿತ್ತು. ಓದುಗರ ಓಲೆಗೆ ಒಂದು ಪತ್ರ ಬರೆದು ಕಳುಹಿಸಿದೆ.ವಿಷಯ ಬಸ್ ನಿರ್ವಾಹಕನೊಬ್ಬನ ವಂಚನೆಯ ಕುರಿತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂಬುದು ಆ ಓಲೆಯ ಸಾರಾಂಶ. ಅದೂ ಪ್ರಕಟಗೊಂಡಿತು. ಅದಾದ ಬಳಿಕ ಹೀಗೇ ಕೆಲವು ವರದಿಗಳು , ಓದುಗರ ಓಲೆಗೆ ಬರಹಗಳು , ಪ್ರತಿಕ್ರಿಯೆ ಹೀಗೇ ಎಲ್ಲವೂ "ಜನ ಈ ದಿನ"ದಲ್ಲಿ ಮುದ್ರಣ ಕಂಡಿತು. ಅದೇ ಹೊತ್ತಿಗೆ ಕಾಲೇಜು ಭಿತ್ತ ಪತ್ರದಲ್ಲೂ ಕೆಲ ಕವನ , ಹನಿಗವನ ಇನ್ನಿತರ ಬರಹಗಳು ಪ್ರಕಟವಾದವು.ಅದರಲ್ಲೊಂದು ಕವನ ಹೀಗಿತ್ತು . .

ವ್ಯತ್ಯಾಸ - ಎಂಬುದು ಶೀರ್ಷಿಕೆ

ಹಿಂದೆ ಹೇಳುತ್ತಿದ್ದರು
ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ
ನಾನೊಬ್ಬ ಸಿಪಾಯಿ,
ಇಂದು ಹೇಳುವರು
ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ
ನಾನೊಬ್ಬ ಬಡಪಾಯಿ !!.

ಇನ್ನೊಂದು ಶೀರ್ಷಿಕೆ : ಪ್ರೀತಿ

ಹಸಿದ ಹೃದಯಕೆ
ನೀಡುವ ಪುಷ್ಠಿದಾಯಕವಾದ
ಆಹರವೇ
ಪ್ರೀತಿ.

ಹೀಗೆ ವಿವಿದ ಕವಿತೆಗಳು ಪ್ರಕಟಗೊಂಡರೆ ಒಂದೆರಡು ಲೇಖನಗಳೂ ಪ್ರಕಟವಾಯಿತು. ಜೊತೆಗೆ ಸಿಂಗಲ್ ಲೈನ್ ಪಂಚ್ ವರ್ಡ್‌ಗಳೂ ಇದ್ದವು ಅದು ಹೇಗಿತ್ತೆಂದರೆ ;-

- ಎಲ್ಲಿಯೇ ಶ್ವಾನ ಪ್ರದರ್ಶನ ಇರಲಿ ಪೋಸ್ಟ್ ಮ್ಯಾನ್ ಮಾತ್ರಾ ಹೋಗೋದೇ ಇಲ್ , ಏಕೆಂದರೆ ಆತ ಮೊದಲೇ ನೋಡಿರುತ್ತಾನೆ ! .

- ಬಸ್ಸು ಬರಲಿಕ್ಕಿಲ್ಲವೆಂದು ಸಿಗರೇಟು ಹೊತ್ತಿಸಿದ ಕ್ಷಣದಲ್ಲೇ ಬಸ್ಸು ಬರುತ್ತದೆ !

- ಹುಡುಗಿಯೊಬ್ಬಳು ನಿಮ್ಮನ್ನು ನೋಡುತ್ತದ್ದರೆ ನಿಮಗೆ ನೋಡದಿರಲಾಗುತ್ತದೆಯೇ ?.

ಇಂತಹ ಕೆಲ ಬರಹಗಳೂ ಇದ್ದವು.ಅಂತೂ ಪುತ್ತೂರು ಎಜುಕೇಶನ್ ಮುಗಿದ ಬಳಿಕ ಇನ್ನೊಂದು ಹೊಸ ಅಧ್ಯಾಯ ಶುರುವಾಯಿತು.ಓದಿದ್ದು ಇಲೆಕ್ಟ್ರಾನಿಕ್ಸ್ ವಿಭಾಗ ಆದರೂ ಇಷ್ಠವಾದ್ದು ಲೇಖನಿ. ಆ ಕಡೆಗೇ ಹೆಚ್ಚು ಆಕರ್ಷಿಸಿತು.ಜೊತೆಗೆ ಹೆಚ್ಚು ಸಂಬಳ ಪಡೆಯುವ ಮತ್ತು ದೂರ ದೇಶಗಳಿಗೆ ಹೋಗೋ ಸಕನಸು ಇದ್ದಿರಲಿಲ್ಲ.ಏಕೆಂದರೆ ಕೃಷಿ ಭೂಮಿ ಹಚ್ಚ ಜಸಿರಾಗಿತ್ತು.ಅದಿನ್ನೂ ವಿವಿದ ಫಸಲುಗಳಿಂದ ಬಸಿರಾಗಿತ್ತು.ಕೆಲವೇ ಸಮಯದಲ್ಲಿ ಅದೆಲ್ಲವೂ ಖುಷಿ ಕೊಡುವುದ್ಕಕಿತ್ತು. ಹಾಗಾಗಿ ರಾಜಧಾನಿ ಕಡೆಗೆ ಒಂದೆರಡು ತಿಂಗಳು ಹೋಗಿ ಬಿಪಿ‌ಎಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡರೂ ಮತ್ತೆ ಮಣ್ಣು ಕರೆಯಿತು , ಕೃಷಿ ಕಣ್ಣಿಗೆ ಕಟ್ಟಿತು.3 ರಿಂದ 15 ಸಾವಿರ ಸಂಬಳದ , ಇನ್ನೊಬ್ಬರ ಕೈಗೆಳಗೆ ದುಡಿಯುವ ಬದಲು ಸ್ವತ: ಕೆಲಸ ಹೇಗೆ ಅನಿಸಿತು.ಹಾಗಾಗಿ ಮರಳಿ ಹುಟ್ಟೂರ ಮಣ್ಣಿಗೆ ಬಂದಾಯಿತು. ಆದರೆ ಇಲ್ಲೂ ಆಕರ್ಷಿತವಾದ್ದು ಲೇಖನಿ. ಬರಹ.