11 October 2010

ಭೂಮಿ ನಡುಗಿತು . . ಗುಡ್ಡ ಕುಸಿಯಿತು . .

ಆಗ ಸುದ್ದಿಗಾಗಿ ಕಾಡು , ಹಳ್ಳಿ ಅಲೆದು ಎಷ್ಟೇ ಖರ್ಚಾದರೂ ಸರಿ ಗ್ರಾಮೀಣ ಸುದ್ದಿಯನ್ನು ನೀಡುವುದು ಒಂದು ಥ್ರಿಲ್ ಕೊಡುತ್ತಿದ್ದ ಸಮಯ. “ಉಷಾಕಿರಣ”ವೂ ಹಾಗೆ ಸುದ್ದಿಯನ್ನು ಚೆನ್ನಾಗೇ ಹಾಕುತ್ತಿತ್ತು.ಹಾಗಾಗಿ ಖರ್ಚು ನೋಡುತ್ತಿರಲೇ ಇಲ್ಲ ಸುದ್ದಿ ಬರಬೇಕು ಅನ್ನೋದು ಮುಖ್ಯವಾಗಿತ್ತು.

ಆವತ್ತು 2005 ಆಗಸ್ಟ್ 18. ಬೆಳಗ್ಗೆ ಮನೆಯಿಂದ ಅದೇ ಸ್ಕೂಟರ್ನಲ್ಲಿ ಗುತ್ತಿಗಾರಿಗೆ ಹೋಗಿದ್ದೆ.ಆಗ ಮಳೆಗಾಲ ಬೇರೆ. ಒಂದು ವಾರದಿಂದ ಮಳೆ ಜೋರಾಗೇ ಸುರಿಯುತ್ತಿತ್ತು.ಅಂದು ಮಾತ್ರಾ ಸ್ವಲ್ಪ ಕಡಿಮೆ. ಗುತ್ತಿಗಾರಿನಲ್ಲಿ ನನ್ನ ಕೆಲಸ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಛಾಯಾಚಿತ್ರ ಗ್ರಾಹಕ ಗೋಪಾಲ ಚತ್ರಪ್ಪಾಡಿ ಸಿಕ್ಕಿ , ಮಹೇಶಣ್ಣ ಕೊಲ್ಲಮೊಗ್ರಕ್ಕೆ ಹೋಗಲಿಕ್ಕಿದೆ ಬರ್ತೀರಾ ?, ನಮ್ಮ ಮೆಸ್ಕಾಂನವರು ಅಲ್ಲಿಗೆ ಹೋಗ್ತಾರೆ ಜೀಪಲ್ಲಿ ,ಬನ್ನಿ ಅಂತದ್ರು.ಎಂತ ವಿಶೇಷ ?, ಅಂದಾಗ ಅಲ್ಲಿ, ಇಡೀ ಗುಡ್ಡವೇ ಕುಸೀತಾ ಇದೆಯಂತೆ , ಸಮೀಪದ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಂತೆ , ಭೂಕಂಪದ ಅನುಭವವಾಗುತ್ತಂತೆ ಅಂದ್ರು. ಸರಿ ಹೋಗೋಣ ಅಂದೆ. ಮೆಸ್ಕಾಂನವರೊಂದಿಗೆ , ಗೋಪಾಲ ಚತ್ರಪ್ಪಾಡಿ ಮತ್ತು ನಾನು ಸೇರಿ ಎಂಟು ಜನ ಕೊಲ್ಲಮೊಗ್ರದ ಕಡೆಗೆ ಹೊರಟೆವು. ಗುತ್ತಿಗಾರಿನಿಂದ ಸುಮಾರು 25 ಕಿಲೋಮೀಟರ್ ದೂರ ಕೊಲ್ಲಮೊಗ್ರಕ್ಕೆ. ಅದೂ ತೀರಾ ಹದಗೆಟ್ಟ ರೋಡ್. 25 ಕಿಲೋ ಮೀಟರ್ ದೂರ ತಲಪಲು ಒಂದು ಗಂಟೆ ಸಮಯ ಹಿಡಿಯಿತು.ಆಗ ಗಂಟೆಯೂ 12 ಆಗಿತ್ತು.ಕೊಲ್ಲಮೊಗ್ರ ಕಳೆದು ಗಡಿಕಲ್ಲು ಬಂತು ಅಲ್ಲಿಂದ ಮುಂದೆ ಕಲ್ಮಕಾರ್ ಹೋಗಿ ಕಡಮ್ಮಕಲ್ ರಬ್ಬರ್ ಎಸ್ಟೇಟ್ ಮೂಲಕ ಶಿಥಿಲ ದಾರಿಯಲ್ಲಿ ಸಾಗುತ್ತಿದ್ದಾಗ ದೊಡ್ಡ ದೊಡ್ಡ ಶಬ್ದ ಕೇಳುತ್ತಿತ್ತು.ಹತ್ತಿರ ಹೊಳೆಯೆಲ್ಲಾ ಮಣ್ಣಿನ ನೀರಿನಂತೆ ಕಾಣುತ್ತಿತ್ತು.ರಬ್ಬರ್ ಎಸ್ಟೇಟ್ ಕಳೆದು ಸ್ವಲ್ಪ ದೂರ ಹೋದ ನಂತರ ಮುಂದೆ ವಾಹನ ಹೋಗೋದಿಲ್ಲ. ಕಾಡು ದಾರಿಯಲ್ಲಿ ದೂರದಿಂದ ಹೋಗಬೇಕು.ಯಾಕೆಂದ್ರೆ ಗುಡ್ಡ ಕುಸೀತ ಇದೆ.ಅಪಾಯ ಕಟ್ಟಿಟ್ಟ ಬುತ್ತಿ.ಹಾಗಾಗಿ ಸುತ್ತು ಬಳಸಿ ಕಾಡು ದಾರಿಯ ಪ್ರಯಾಣ ಮುಂದುವರಿಯಿತು. ಹಾಗೆ ಸುಮಾರು ಅದ ಗಂಟೆ ಹೋದ ಬಳಿಕ ಎದುರು ನೋಡುತ್ತಿದ್ದರೆ ಇಡೀ ಗುಡ್ಡವೇ ಕುಸೀತ ಇದೆ.ನೋಡನೋಡುತ್ತಿದ್ದಂತೆಯೇ ಎದುರಿನ ಗುಡ್ಡ ಮರದ ಸಹಿತವಾಗಿ ಬೀಳ್ತಾ ಇದೆ.ಮುಂದೆ ಹೋಗೋದಿಕ್ಕೂ ಹೆದರಿಕೆ.ಇಡೀ ಕಾಡು ನಾಶವಾಗಿ ದೊಡ್ಡ ಕಣಿವೆಯೇ ಸೃಷ್ಠಿಯಾಗಿತ್ತು.ಮತ್ತೂ ಕುಸೀತಾ ಇದೆ ಗುಡ್ಡ.ಹಾಗೆ ಕುಸಿಯುವಾಗ ಇಡೀ ಭೂಮಿಯೇ ಅದುರಿದ ಅನುಭವವಾಗುತ್ತೆ.ಸ್ವಲ್ಪ ಕಂಪನವೂ ಆಗುತ್ತದೆ. ಇದೆಲ್ಲವನ್ನೂ ಗೋಪಾಲ್ ಚತ್ರಪ್ಪಾಡಿ ತಮ್ಮ ಕ್ಯಾಮಾರದಲ್ಲಿ ಕ್ಲಿಕ್ಕಿಸಿಕೊಂಡರು.ಇದೆಲ್ಲಾ ದಾಖಲಿಸಿಕೊಂಡು ಗುಡ್ಡ ಇಳೀಬೇಕಾದ್ರೆ ಸುಸ್ತೋ ಸುಸ್ತು.ಮೈ ಬಟ್ಟೆಯೆಲ್ಲಾ ಮಣ್ಣಾಗಿತ್ತು.ಆಗ ಸಮಯ ಗಂಟೆ 3 ಆಗಿತ್ತು. ಊಟವೂ ಇಲ್ಲ.ಅಲ್ಲೇ ಕಲ್ಮಕಾರಿನಲ್ಲಿ ಇದ್ದ ಅಂಗಡಿಯಿಂದ ಬಿಸ್ಕೇಟ್ ಮತ್ತು ಹತ್ತಿರ ಮನೆಯಲ್ಲಿ ಚಾ ಕುಡಿದು ಗುತ್ತಿಗಾರಿನ ಕಡೆಗೆ ಬಂದೆವು.

ಮರುದಿನ ಪತ್ರಿಕೆಯಲ್ಲಿ ಇದು ಚಿತ್ರ ಸಹಿತವಾಗಿ ಬರಬೇಕಲ್ಲ.ಏನು ಮಾಡೋದು?. ಆಗ ಇದ್ದದ್ದು ಡಿಜಿಟಲ್ ಕ್ಯಾಮಾರಾವೂ ಅಲ್ಲ , ಅದು ರೀಲ್ ಕ್ಯಾಮಾರಾ. ಗೋಪಾಲ ಚತ್ರಪ್ಪಾಡಿ ಹೇಳಿದ್ರು ಇದನ್ನು ಸುಳ್ಯದಲ್ಲಿ ಪ್ರಿಂಟ್‌ಗೆ ಕೊಡ್ತೇನೆ ಅಲ್ಲಿಂದ ಕಳುಹಿಸೋಣ ಅಂತಾಯ್ತು. ಹಾಗೆ ಗುತ್ತಿಗಾರಿಗೆ ತಲಪುವಾಗ ಸಂಜೆ 5 ಗಂಟೆ. ಮರುದಿನ ಗೋಪಾಲ ಚತ್ರಪ್ಪಾಡಿ ಸುಳ್ಯಕ್ಕೆ ಬೆಳಗೇನೇ ಕಳುಹಿಸಿದ್ರು. ಆದ್ರೆ ಕಮ್ಯುನಿಕೇಶನ್ ಗ್ಯಾಪ್‌ನಿಂದ ಫೋಟೋ ಪ್ರಿಂಟ್ ಆಗಿ ಮತ್ತೆ ಮಧ್ಯಾಹ್ನದ ಹೊತ್ತಿಗೆ ಗುತ್ತಿಗಾರಿಗೆ ಬಂತು. ಮಂಗಳೂರಿಗೆ ಕಳುಹಿಸೋದು ಹೇಗೆ ?. ಕೊರಿಯರ್ ಮಾಡಿದ್ರೆ ಒಂದು ದಿನ ಲೇಟಾಗುತ್ತೆ.ಏನ್ ಮಾಡೋದು ಆಫೀಸಿಗೂ ಹೇಳಿ ಆಗಿದೆ . ನ್ಯೂಸ್ ಫ್ಯಾಕ್ಸ್ ಮಾಡಿಯೂ ಆಗಿದೆ.ಇಷ್ಟೆಲ್ಲಾ ಹೋಗಿ ಫೋಟೋ ಬರದಿದ್ರೆ ಹೇಗೆ ?. ಅಂತ ಛೆ . ಛೆ ಅಂತ ಯೋಚನೆ ಮಾಡುತ್ತಿರಬೇಕಾದ್ರೆ ಆಫೀಸಿನಿಂದ ಹೇಳಿದ್ರು ಎಲ್ಲಿಂದಾದ್ರು ಮೈಲ್ ಮಾಡಿ ಅಂತ. ಆಗ ಗುತ್ತಿಗಾರಿನಲ್ಲಿ ಮೈಲ್ ಇದ್ದದ್ದು ಕಾಂತಿಲ ಸತ್ಯಣ್ಣನ ಮನೆಯಲ್ಲಿ. ಸರಿ ಅವರಿಗೂ ರಿಕ್ವೆಸ್ಟ್ ಮಾಡಿ ಫೋಟೋ ಸ್ಕ್ಯಾನ್ ಮಾಡಿ ಸಂಜೆ ಏಳು ಗಂಟೆಯಿಂದ ಫೋಟೋ ಅಟ್ಯಾಚ್‌ಗೆ ಕುಳಿತಾಯಿತು,.ಒಳ್ಳೊಳ್ಳೆ 6 ಫೋಟೋ ಇತ್ತು.ಆದ್ರೂ ಫೋಟೋ ಅಟ್ಯಾಚ್ ಆಗ್ಬಕಲ್ಲಾ ?. ಅದು ನೆಟ್‌ವನ್ ಬೇರೆ ತುಂಬಾ ಸ್ಲೋ. ಆಗಾಗ ಕಟ್ ಆಗ್ತಾನೂ ಇತ್ತು.ಅಂತೂ ಇಂತು ರಾತ್ರಿ 11 ಗಂಟೆ ಆಗೋವಾಗ 2 ಫೋಟೋ ಹೋಯ್ತು. ಬಚಾವ್ ಅಂತ ಮನೆಗೆ ಬಂದಾಯ್ತು.

ಮರುದಿನ ಬ್ಯಾಕ್ ಪೇಜಲ್ಲಿ ಲೀಟ್ ಮಾಡಿ 2 ಫೋಟೋ ಸಹಿತ “ ಭೂಮಿ ನಡುಗಿತು , ಗುಡ್ಡ ಕುಸಿಯಿತು “ ಎಂಬ ಶೀರ್ಷಿಕೆಯಲ್ಲಿ ಆ ಸುದ್ದಿ ಪ್ರಕಟವಾಯಿತು.ಕೆಲ ಜನ ನೋಡಿ ಹೌದಾ ಅಂತಾನೂ ಕೇಳಿದ್ರು.






ಈ ಸುದ್ದಿ ನೋಡಿದ ಉದಯವಾಣಿಯ ವಿಠಲ್ ರಾವ್ , ಏ. . ನಂಗೂ ಫೋಟೋ ಕೊಡು ಮಾರಾಯ ಅಂದ್ರು. ಆಗ ನಮಗೆ ಬೇರೇನೂ ಗೊತ್ತಿಲ್ಲ.ಸರಿ ಅಂತ ಸುಬ್ರಹ್ಮಣ್ಯದಿಂದ ನಿನ್ನೆ ರಾತ್ರಿ 11 ಗಂಟೆಯವರೆಗೆ ಕೂತು ಕಳುಹಿಸಿದ ಫೋಟೋ ಸೆಂಟ್ ಐಟಂನಲ್ಲಿ ಇತ್ತಲ್ಲಾ ಅದನ್ನೇ ಫಾರ್ವಡ್ ಮಾಡಿದೆ. ಸರಿ ಮರುದಿನ ಉದಯವಾಣಿಯಲ್ಲೂ ದೊಡ್ಡದಾಗಿ ಬಂತು.ಸುದ್ದಿ ಎಲ್ಲಾ ಗೊತ್ತಾಯಿತು. ಹೇಗೂ ಹೆಚ್ಚು ಪ್ರಸಾರ ಇತ್ತಲ್ಲಾ , ಜನ ಮಾತಾಡಿದ್ರು. ಏ. . ಅದು ಉದಯವಾಣಿಯಲ್ಲಿ ಬಂದಿದೆ ಅಂತ ಹೇಳಿದ್ರು, ಅವರು ಅಲ್ಲಿಗೆ ಹೇಗೆ ಹೋದ್ರು ಮಾರಾಯ ಅಂತ ನನ್ನಲ್ಲೇ ಕೇಳಿದ್ರು. ..!. ನಾವು ಪೆಚ್ಚು ಮೋರೆ ಹಾಕಿಕೊಂಡು ಅದು ಅವರಲ್ಲ ನಾವು ಹೋದ್ದು ಅಂತ ಸಾರಿ ಸಾರಿ ಹೇಳಬೇಕಾಯಿತು.